ಹಾರ್ಮುಝ್ ಬಿಕ್ಕಟ್ಟು: ಭಾರತಕ್ಕೆ ಆಗಮಿಸುವ 40 ಹಡಗುಗಳು ಸಂಕಷ್ಟದಲ್ಲಿ

ಸಾಂದರ್ಭಿಕ ಚಿತ್ರ Photo: x.com/amyak397
ಹೊಸದಿಲ್ಲಿ: ಹಾರ್ಮುಝ್ ಜಲಸಂಧಿಯನ್ನು ಮುಕ್ತಗೊಳಿಸುವುದು ಮತ್ತು ಮಧ್ಯಪ್ರಾಚ್ಯ ಯುದ್ಧ ಕೊನೆಗೊಳಿಸುವುದು ಸೇರಿದಂತೆ ಹಲವು ವಿಚಾರಗಳಲ್ಲಿ ಒಪ್ಪಂದ ಮಾಡಿಕೊಳ್ಳಲು ಅಮೆರಿಕ ಹಾಗೂ ಇರಾನ್ ಮಾತುಕತೆ ನಡೆಸಲು ಮುಂದಾಗಿರುವ ನಡುವೆಯೇ ಬಿಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಭಾರತಕ್ಕೆ ಆಗಮಿಸುವ 40ಕ್ಕೂ ಹೆಚ್ಚು ಹಡಗುಗಳು ಜಲಸಂಧಿಯ ಬಳಿ ಸಿಕ್ಕಿಹಾಕಿಕೊಂಡಿವೆ.
ಈ ಬಿಕ್ಕಟ್ಟು ಶೀಘ್ರ ಬಗೆಹರಿದರೆ ಈ ಹಡಗುಗಳಿಗೆ ಮತ್ತು ಎರಡು ತಿಂಗಳಿಗೂ ಅಧಿಕ ಕಾಲದಿಂದ ಪರ್ಶಿಯನ್ ಕೊಲ್ಲಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯ ಸಿಬ್ಬಂದಿಯ ಪ್ರಯಾಣ ಸುಗಮವಾಗಲಿದೆ ಎಂದು ಮೂಲಗಳು ಹೇಳಿವೆ.
ಎಲ್ಪಿಜಿ, ಎಲ್ಎನ್ಜಿ ಮತ್ತು ಕಚ್ಚಾತೈಲ, ರಸಗೊಬ್ಬರ ಹಾಗೂ ಇತರ ಸರಕುಗಳು ಹೊತ್ತ ಹಡಗುಗಳು ಸಿಕ್ಕಿಹಾಕಿಕೊಂಡಿವೆ. ಭಾರತದ 13 ಹಡಗುಗಳು ಇನ್ನೂ ಪರ್ಶಿಯನ್ ಕೊಲ್ಲಿಯಲ್ಲಿವೆ ಎಂದು ಸರ್ಕಾರ ಹೇಳಿಕೆ ನೀಡಿದೆ. ಅಂತೆಯೇ ಭಾರತಕ್ಕೆ ಸರಕು ಸಾಗಾಣಿಕೆ ಮಾಡುವ ಹಲವು ವಿದೇಶಿ ಹಡಗುಗಳು ಕೂಡ ಹಾರ್ಮುಝ್ನ ಪಶ್ಚಿಮ ಭಾಗದಲ್ಲಿ ಅತಂತ್ರವಾಗಿವೆ. 41 ಹಡಗುಗಳನ್ನು ಆದ್ಯತೆಯ ಮೇಲೆ ತೆರವುಗೊಳಿಸಲು ಸರ್ಕಾರ ಕಾರ್ಯತಂತ್ರ ರೂಪಿಸುತ್ತಿದೆ. ಈ ಪೈಕಿ 18 ಹಡಗುಗಳು ಇಂಧನ ಉತ್ಪನ್ನಗಳನ್ನು ಹಾಗೂ 16 ಹಡಗುಗಳು ರಸಗೊಬ್ಬರ ಹಾಗೂ ಇತರ ಹಡಗುಗಳು ಇತರ ಸರಕುಗಳನ್ನು ಹೊತ್ತು ತರುತ್ತಿವೆ ಎಂದು ಮೂಲಗಳು ತಿಳಿಸಿವೆ.
ದೇಶದ ಇಂಧನ ಭದ್ರತೆ ಮತ್ತು ಮುಂಗಾರು ಹಂಗಾಮಿನ ರಸಗೊಬ್ಬರ ಅಗತ್ಯತೆಯ ಹಿನ್ನೆಲೆಯಲ್ಲಿ ಈ ಹಡಗುಗಳನ್ನು ಆದ್ಯತೆಯ ಮೇಲೆ ತೆರವುಗೊಳಿಸುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹಡಗುಗಳನ್ನು ಪರ್ಶಿಯನ್ ಕೊಲ್ಲಿಗೆ ವಾಪಾಸು ಕಳುಹಿಸಲು ಮನವೊಲಿಸಲಾಗುತ್ತಿದ್ದು, 22 ಇಂಧನ ಹಡಗುಗಳ ಪಟ್ಟಿಯನ್ನು ಸಂಬಂಧಪಟ್ಟ ಅಧಿಕಾರಿಗಳ ಜತೆ ಹಂಚಿಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.






