ಹಾರ್ಮುಝ್ ಬಿಕ್ಕಟ್ಟು | ಇರಾನ್ ನಿಂದ ಪಶ್ಚಿಮ ಏಶ್ಯದಲ್ಲಿ ದಾಳಿಯ ಬೆದರಿಕೆ

ಸಾಂದರ್ಭಿಕ ಚಿತ್ರ | PTI
ಟೆಹರಾನ್: ಅಮೆರಿಕದ ವಿರುದ್ಧ ತನ್ನ ವಾಗ್ದಾಳಿಯನ್ನು ತೀವ್ರಗೊಳಿಸಿರುವ ಇರಾನ್, ಪಶ್ಚಿಮ ಏಶ್ಯಾದಾದ್ಯಂತ ಮೂಲಸೌಕರ್ಯಗಳ ಮೇಲೆ ದಾಳಿ ನಡೆಸುವ ಬೆದರಿಕೆ ಹಾಕಿದೆ. ಹಾರ್ಮುಝ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ತನ್ನ ನೂತನ ಯೋಜನೆಗೆ ವಾಶಿಂಗ್ಟನ್ ನಿಂದ ಔಪಚಾರಿಕ ಉತ್ತರವನ್ನು ಕಾಯುತ್ತಿರುವುದಾಗಿ ಇರಾನ್ ಹೇಳಿದೆ.
‘ಈ ಪ್ರದೇಶದಲ್ಲಿ ನಮಗೆ ತೈಲವನ್ನು ಮಾರಾಟ ಮಾಡಲು ಸಾಧ್ಯವಾಗದಿದ್ದರೆ, ಇತರರು ಕೂಡಾ ತೈಲ ಮಾರಾಟ ಮಾಡಬಾರದು ಅಥವಾ ನಮ್ಮ ಭದ್ರತೆಯ ಬಗ್ಗೆ ಖಾತರಿಯಿಲ್ಲದಿದ್ದರೆ, ಯಾವುದೇ ಮೂಲಸೌಕರ್ಯವು ಸುರಕ್ಷಿತವಾಗಿರುವುದಿಲ್ಲ’ ಎಂದು ಇರಾನ್ ಸಂಸತ್ ನ ಸ್ಪೀಕರ್ ಹಾಗೂ ಮುಖ್ಯ ಸಂಧಾನಕಾರ ಮೊಹಮ್ಮದ್ ಬಾಘೇರ್ ಘಾಲಿಬಾಫ್ ಅವರು ತಿಳಿಸಿದ್ದಾರೆ.
ಹಾರ್ಮುಝ್ ಜಲಸಂಧಿಯನ್ನು ಶರತ್ತುಬದ್ಧವಾಗಿ ಮತ್ತೆ ತೆರೆದಿಡುವ ಟೆಹರಾನ್ ನ ಪ್ರಸ್ತಾವನೆಗೆ ಅಮೆರಿಕದಿಂದ ಉತ್ತರವನ್ನು ನಿರೀಕ್ಷಿಸುತ್ತಿರುವುದಾಗಿ ಇರಾನ್ ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ತಿಳಿಸಿದ್ದಾರೆ. ಖತರ್ ಮಧ್ಯವರ್ತಿಗಳ ಮೂಲಕ ಇರಾನ್ ನ ಪ್ರಸ್ತಾವನೆಯನ್ನು ಅಮೆರಿಕಕ್ಕೆ ತಲುಪಿಸಲು ಮುಂದಾಗಿದೆ. ವಾಶಿಂಗ್ಟನ್ ನ ಅಂತಿಮ ಪ್ರತಿಕ್ರಿಯೆಯನ್ನು ಮಂಗಳವಾರದೊಳಗೆ ನಿರೀಕ್ಷಿಸುತ್ತಿರುವುದಾಗಿ ಅರಾಘ್ಚಿ ತಿಳಿಸಿದ್ದಾರೆ.
ಈ ವರ್ಷದ ಫೆಬ್ರುವರಿ ತಿಂಗಳ ಅಂತ್ಯದಲ್ಲಿ ಯುದ್ಧ ಆರಂಭವಾದಾಗಿನಿಂದ ಇರಾನ್, ಹಾರ್ಮುಝ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರವನ್ನು ನಿರ್ಬಂಧಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೆರಿಕವು, ಇರಾನ್ ತೈಲವನ್ನು ರಫ್ತು ಮಾಡದಂತೆ ತಡೆಯಲು ಅದರ ಬಂದರುಗಳಿಗೆ ನಿರ್ಬಂಧ ವಿಧಿಸಿದೆ. ಜಗತ್ತಿನಾದ್ಯಂತ ಸಾಗಾಟವಾಗುವ ಐದನೇ ಒಂದು ಭಾಗದಷ್ಟು ತೈಲವು ಆಯಕಟ್ಟಿನ ಹಾರ್ಮುಝ್ ಜಲಸಂಧಿಯ ಮೂಲಕ ಹಾದುಹೋಗುತ್ತದೆ. ಟೆಹರಾನ್ ನ ಪ್ರಸ್ತಾವನೆಯನ್ನು ಟ್ರಂಪ್ ತಿರಸ್ಕರಿಸಿರುವ ಹೊರತಾಗಿಯೂ ಖತರ್ ಸೇರಿದಂತೆ ಮಧ್ಯವರ್ತಿ ದೇಶಗಳು ಅಮೆರಿಕ–ಇರಾನ್ ನಡುವೆ ಶಾಂತಿ ಒಪ್ಪಂದವನ್ನು ಏರ್ಪಡಿಸಲು ಪ್ರಯತ್ನಿಸುತ್ತಿವೆ.






