ಹಾರ್ಮುಝ್ ಈಗಲೂ ನಮ್ಮ ನಿಯಂತ್ರಣದಲ್ಲಿದೆ, ನಾವು ಮಾತುಕತೆಯನ್ನು ಬಯಸುತ್ತಿಲ್ಲ: ಇರಾನ್

ಸಾಂದರ್ಭಿಕ ಚಿತ್ರ | Photo Credit : AP , PTI
ಟೆಹರಾನ್, ಜು.27: ಇಸ್ರೇಲ್ ಪ್ರಭಾವಕ್ಕೆ ಒಳಗಾಗಿ ಅಮೆರಿಕ ಆರಂಭಿಸಿದ ಐದು ತಿಂಗಳ ಯುದ್ಧದ ನಂತರ, ಅದು ಈಗ ಸಿಲುಕಿಕೊಂಡು ಹೆಣಗಾಡುತ್ತಿದೆ ಮತ್ತು ಖಂಡಿತವಾಗಿಯೂ ಇದರ ಪರಿಣಾಮವನ್ನು ಎದುರಿಸಲಿದೆ ಎಂದು ಇರಾನ್ ಹೇಳಿದೆ.
ಸುಮಾರು ಎರಡು ವಾರಗಳ ಭಾರಿ ಬಾಂಬ್ ದಾಳಿಯ ನಂತರ, ಅಮೆರಿಕವು ಇರಾನ್ ವಿರುದ್ಧದ ದಾಳಿಯನ್ನು ಸದ್ಯಕ್ಕೆ ತಡೆಹಿಡಿದಿದೆ. ಇದರಿಂದಾಗಿ ಇರಾನ್ ಕೂಡ ಮಧ್ಯಪ್ರಾಚ್ಯದಲ್ಲಿ ನಡೆಸುತ್ತಿದ್ದ ಪ್ರತೀಕಾರದ ದಾಳಿಗಳನ್ನು ಸ್ಥಗಿತಗೊಳಿಸಿದೆ.
ತಾನು ಇನ್ನೂ ಹಾಮುಝ್ ಜಲಸಂಧಿಯ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದು, ಅಮೆರಿಕದೊಂದಿಗೆ ಶಾಂತಿ ಮಾತುಕತೆಯನ್ನು ಪುನರಾರಂಭಿಸಲು ಬಯಸುತ್ತಿಲ್ಲ ಎಂದು ಇರಾನ್ ಸೋಮವಾರದಂದು ಹೇಳಿದೆ.
ಸಂಧಾನದ ಮಾತುಕತೆಗಳಿಗೆ ಅವಕಾಶ ಮಾಡಿಕೊಡಲು ಟ್ರಂಪ್ ಅವರು ತಮ್ಮ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ತಡೆಹಿಡಿದಿದ್ದಾರೆ ಎಂದು ವಿಶ್ವಸಂಸ್ಥೆಯ ಅಮೆರಿಕದ ರಾಯಭಾರಿ ಮೈಕ್ ವಾಲ್ಟ್ಜ್ ರವಿವಾರ ತಿಳಿಸಿದ್ದರು. ಇರಾನ್ `ಒಪ್ಪಂದಕ್ಕಾಗಿ ಬೇಡಿಕೊಳ್ಳುತ್ತಿದೆ' ಎಂದು ಟ್ರಂಪ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮತ್ತು ಇತರ ಅಮೆರಿಕದ ಅಧಿಕಾರಿಗಳು ಪ್ರತಿಪಾದಿಸಿದ್ದರು.
ಆದರೆ, ಸೋಮವಾರ ನಡೆದ ದೂರದರ್ಶನ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಗಾಯೀ ` ಅಮೆರಿಕದೊಂದಿಗೆ ಶಾಂತಿ ಮಾತುಕತೆಯನ್ನು ಪುನರಾರಂಭಿಸಲು ಇರಾನ್ ಯಾವುದೇ ವಿನಂತಿ ಮಾಡಿಲ್ಲ' ಎಂದು ಸ್ಪಷ್ಟಪಡಿಸಿದರು.
ಮಧ್ಯಸ್ಥಿಕೆ ವಹಿಸಿರುವವರ ಮೂಲಕ ಎರಡೂ ದೇಶಗಳ ನಡುವೆ ಇಂದಿಗೂ ಸಂದೇಶಗಳು ವಿನಿಮಯವಾಗುತ್ತಿದ್ದು, ಇರಾನ್ ರಾಜತಾಂತ್ರಿಕತೆಯನ್ನು ಕೈಬಿಟ್ಟಿಲ್ಲ. ಆದರೆ ಇರಾನ್ ಅಮೆರಿಕದೊಂದಿಗೆ ಮಾತುಕತೆಗೆ ವಿನಂತಿಸಿದೆ ಎಂಬ ವರದಿಗಳು ಸಂಪೂರ್ಣ ಕಾಲ್ಪನಿಕ ಹಾಗೂ ಕಟ್ಟುಕಥೆಗಳಾಗಿವೆ. ಇದು ನಮ್ಮ ಡಿಎನ್ಎಯಲ್ಲೇ ಇಲ್ಲ' ಎಂದು ಬಘಾಯಿ ಹೇಳಿದ್ದಾರೆ.
ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದ ಪ್ರಮುಖ ಬೆಳವಣಿಗೆಗಳು:
ಅಮೆರಿಕದ ಬಾಂಬ್ ದಾಳಿಯ ಅಂತ್ಯವು ಜಾಗತಿಕ ತೈಲ ಪೂರೈಕೆಯಲ್ಲಿ ಉಂಟಾಗಿದ್ದ ಅಡಚಣೆಗಳು ನಿವಾರಣೆಯಾಗಬಹುದು ಎಂಬ ಭರವಸೆಯನ್ನು ಮೂಡಿಸಿದ್ದು, ಕಚ್ಚಾ ತೈಲದ ಬೆಲೆ ಗಣನೀಯವಾಗಿ ಕುಸಿಯಲು ಕಾರಣವಾಗಿದೆ. ಕಳೆದ ವಾರ ಬ್ಯಾರೆಲ್ಗೆ 100 ಡಾಲರ್ ದಾಟಿದ್ದ ಬ್ರೆಂಟ್ ಕಚ್ಚಾ ತೈಲದ ಬೆಲೆ, ಸೋಮವಾರ 89 ಡಾಲರ್ಗಿಂತಲೂ ಕೆಳಕ್ಕೆ ಬಂದಿದೆ.
ಜೋರ್ಡಾನ್ ಗಡಿಯ ಬಳಿ ಸೋಮವಾರ ಎರಡು ಡ್ರೋನ್ಗಳನ್ನು ಹೊಡೆದುರುಳಿಸಿದ್ದು, ಅವುಗಳನ್ನು ಎಲ್ಲಿಂದ ಉಡಾವಣೆ ಮಾಡಲಾಗಿತ್ತು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಇಸ್ರೇಲ್ ಮಿಲಿಟರಿ ತಿಳಿಸಿದೆ.
ಇರಾನ್ ಅಧಿಕಾರಿಗಳು ಅನುಮೋದಿಸದ ಮಾರ್ಗಗಳ ಮೂಲಕ ಹಾರ್ಮುಝ್ ಜಲಸಂಧಿಯನ್ನು ದಾಟಲು ಯತ್ನಿಸಿದ ಆರು ಹಡಗುಗಳನ್ನು ಇರಾನ್ನ ರೆವಲ್ಯೂಷನರಿ ಗಾಡ್ರ್ಸ್ ನೌಕಾಪಡೆ ತಡೆದು, ವಾಪಸ್ ಕಳುಹಿಸಿದೆ ಎಂದು ಇರಾನ್ನ ಸರಕಾರಿ ಸ್ವಾಮ್ಯದ ದೂರದರ್ಶನ ಸೋಮವಾರ ವರದಿ ಮಾಡಿದೆ.
ಹಾರ್ಮುಝ್ ಕುರಿತ ಮಾತುಕತೆಗೂ ಅಮೆರಿಕಕ್ಕೂ ಯಾವುದೇ ಸಂಬಂಧವಿಲ್ಲ: ಇರಾನ್
ಕಾರ್ಯತಂತ್ರದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿರುವ ಹಾರ್ಮುಝ್ ಜಲಸಂಧಿಯ ನಿರ್ವಹಣೆ ಕುರಿತು ಒಮಾನ್ ಜೊತೆ ಇತ್ತೀಚೆಗೆ ನಡೆದ ಮಾತುಕತೆಯಲ್ಲಿ ಅಮೆರಿಕ ಭಾಗಿಯಾಗಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.
ಈ ಮಾತುಕತೆಗಳಿಗೂ ಅಮೆರಿಕಕ್ಕೂ ಯಾವುದೇ ಸಂಬಂಧವಿಲ್ಲ. ಇವು ಇರಾನ್ ಮತ್ತು ಒಮಾನ್ ನಡುವಿನ ದ್ವಿಪಕ್ಷೀಯ ವಿಚಾರವಾಗಿದ್ದು, ಮಾತುಕತೆಗಳು ಮುಂದುವರಿಯುತ್ತಿವೆ ಎಂದು ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಘಾಯೀ ವಾರಾಂತ್ಯದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು ಈ ಜಲಸಂಧಿಯು `ಈಗಲೂ ಮುಚ್ಚಲ್ಪಟ್ಟಿದೆ' ಎಂದು ಹೇಳಿದ್ದಾರೆ. ಇದೇ ವೇಳೆ ಅಮೆರಿಕವನ್ನು ಟೀಕಿಸಿದ ಬಘಾಯೀ `ಇತ್ತೀಚಿನ ವರ್ಷಗಳಲ್ಲಿ ಅದರ ನಡವಳಿಕೆಯು ಯಾವುದೇ ನಿಯಮ ಅಥವಾ ಕಾನೂನುಗಳಿಗೆ ಬದ್ಧವಾಗಿರದ ಮಾಫಿಯಾ ಗ್ಯಾಂಗ್ನಂತೆ ಕಾಣುತ್ತಿದೆ. ಅಮೆರಿಕದ ಇಂತಹ ನಡವಳಿಕೆಯು ಮುಂದುವರಿಯುವವರೆಗೆ, ನಾವು ಯಾವುದೇ ಅರ್ಥಪೂರ್ಣ ಪ್ರಕ್ರಿಯೆಯ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಜಲಸಂಧಿಯ ಮೂಲಕ ಹಡಗುಗಳ ಸುರಕ್ಷಿತ ಸಂಚಾರವನ್ನು ಖಚಿತಪಡಿಸಿಕೊಳ್ಳಲು ಸಾಮಾನ್ಯ ತತ್ವಗಳು ಮತ್ತು ಕಾರ್ಯಾಚರಣೆಯ ವ್ಯವಸ್ಥೆಗಳ ಕುರಿತು ಇರಾನ್ ಮತ್ತು ಒಮಾನ್ ದೇಶಗಳ ಉಪ ವಿದೇಶಾಂಗ ಸಚಿವರು ಶುಕ್ರವಾರ ಮತ್ತು ಶನಿವಾರ ಮಾತುಕತೆ ನಡೆಸಿರುವುದಾಗಿ ವರದಿಯಾಗಿದೆ.






