‘ಸಮುದ್ರದ ನೀರೇ ಹೊತ್ತಿ ಉರಿಯುತ್ತಿತ್ತು’; ಯುದ್ಧದ ನಡುವೆಯೇ ಹಾರ್ಮುಝ್ ಜಲಸಂಧಿಯಲ್ಲಿ 15 ಕಿ.ಮೀ. ಈಜಿದ ಬ್ರಿಟನ್ ನ ಸಾಹಸಿಯ ಹೇಳಿಕೆ
ಸಮುದ್ರದೊಳಗಿನ ಚಿತ್ರಣ ಹೇಗಿತ್ತು?

ಸಾಂದರ್ಭಿಕ ಚಿತ್ರ (AI Generated)
ಲಂಡನ್: ಇರಾನ್ ನೊಂದಿಗಿನ ಯುದ್ಧದಿಂದ ಹಾರ್ಮುಝ್ ಜಲಸಂಧಿಯ ಸಮುದ್ರ ಪರಿಸರದ ಮೇಲಾಗುತ್ತಿರುವ ಭೀಕರ ಪರಿಣಾಮಗಳ ಬಗ್ಗೆ ಜಗತ್ತಿನ ಗಮನ ಸೆಳೆಯಲು ಬ್ರಿಟನ್ ನ ಖ್ಯಾತ ಈಜುಗಾರ ಲೂಯಿಸ್ ಪ್ಯೂ (56) ಯುದ್ಧದ ಅಪಾಯಗಳ ನಡುವೆಯೇ ಸುಮಾರು 15 ಕಿ.ಮೀ. ಈಜಿದ್ದಾರೆ.
ವಿಶ್ವಸಂಸ್ಥೆಯ ಸಾಗರಗಳ ರಾಯಭಾರಿಯಾಗಿರುವ ಪ್ಯೂ, ಮೂರು ದಿನಗಳ ಕಾಲ ಹಾರ್ಮುಝ್ ಜಲಸಂಧಿಯ ವಿವಿಧ ಭಾಗಗಳಲ್ಲಿ ಈ ಸಾಹಸ ನಡೆಸಿದ್ದಾರೆ. ಯುದ್ಧ ಆರಂಭವಾದ ಬಳಿಕ ಈ ಜಲಸಂಧಿಯಲ್ಲಿ ದೂರದ ಈಜು ಸಾಹಸ ಕೈಗೊಂಡ ಮೊದಲ ವ್ಯಕ್ತಿ ಇವರಾಗಿರಬಹುದು ಎಂದು ವರದಿಗಳು ತಿಳಿಸಿವೆ.
ಸೋಮವಾರ ಈಜಲು ನೀರಿಗಿಳಿದ ಕೆಲವೇ ನಿಮಿಷಗಳಲ್ಲಿ ಎರಡು ಬಾರಿ ಸ್ಫೋಟಗಳ ಸದ್ದು ಕೇಳಿಸಿತ್ತು. ಸುಮಾರು ನಾಲ್ಕು ಕಿ.ಮೀ. ದೂರದಲ್ಲಿದ್ದ ತೈಲ ಸಾಗಣೆ ಹಡಗಿನ ಮೇಲೆ ದಾಳಿ ನಡೆದಿರುವುದನ್ನು ಅವರು ಗಮನಿಸಿದ್ದರು. ಸ್ಫೋಟದ ಬಳಿಕ ಯುದ್ಧ ವಿಮಾನಗಳು ಹಾರಾಟ ನಡೆಸಿದ್ದರಿಂದ ತಕ್ಷಣವೇ ಅಲ್ಲಿಂದ ಹೊರಬರಬೇಕಾಯಿತು ಎಂದು ಅವರು ಅಸೋಸಿಯೇಟೆಡ್ ಪ್ರೆಸ್ ಗೆ ತಿಳಿಸಿದ್ದಾರೆ.
ಅಪಾಯದ ನಡುವೆಯೂ ಮೂರು ದಿನಗಳಲ್ಲಿ ಒಟ್ಟು ಆರು ಗಂಟೆ 30 ನಿಮಿಷ ಈಜುವ ಮೂಲಕ ಸುಮಾರು 15 ಕಿ.ಮೀ. ದೂರ ಕ್ರಮಿಸಿದ್ದಾರೆ. ಈ ವೇಳೆ ದಾಳಿಗೊಳಗಾಗಿದ್ದ ಅನಿಲ ಸಾಗಣೆ ಹಡಗೊಂದರ ಸಮೀಪದಿಂದಲೂ ಅವರು ಹಾದುಹೋಗಿದ್ದರು. ಹಡಗಿನಿಂದ ಆಕಾಶದೆತ್ತರಕ್ಕೆ ಜ್ವಾಲೆಗಳು ಚಿಮ್ಮುತ್ತಿದ್ದವು. ಸುತ್ತಲಿನ ಸಮುದ್ರದ ನೀರಿಗೂ ಬೆಂಕಿ ಹೊತ್ತಿಕೊಂಡಿತ್ತು ಎಂದು ಅವರು ಅನುಭವ ಹಂಚಿಕೊಂಡಿದ್ದಾರೆ.
‘ಆ ಅನಿಲ ಸಾಗಣೆ ಹಡಗಿನ ಪಕ್ಕದಿಂದ ಹಾದುಹೋಗುವಾಗ ಬಂದ ರಾಸಾಯನಿಕಗಳ ವಾಸನೆ ಮತ್ತು ಆಕಾಶಕ್ಕೆ ಚಿಮ್ಮುತ್ತಿದ್ದ ಬೆಂಕಿಯ ಜ್ವಾಲೆಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಹಡಗಿನ ಸುತ್ತಲಿನ ನೀರೇ ಹೊತ್ತಿ ಉರಿಯುತ್ತಿತ್ತು’ ಎಂದು ಪ್ಯೂ ಹೇಳಿದ್ದಾರೆ.
ದಾಳಿಗೊಳಗಾದ ಅಥವಾ ಮುಳುಗಡೆಯಾದ ತೈಲ ಸಾಗಣೆ ಹಡಗುಗಳಿಂದ ಸಮುದ್ರಕ್ಕೆ ತೈಲ ಮತ್ತು ರಾಸಾಯನಿಕಗಳು ಸೋರಿಕೆಯಾದರೆ ಸಮುದ್ರ ಜೀವಿಗಳು, ಹವಳದ ದಿಬ್ಬಗಳು, ಮ್ಯಾಂಗ್ರೋವ್ ಕಾಡುಗಳು ಹಾಗೂ ಕರಾವಳಿ ಪ್ರದೇಶಗಳಿಗೆ ತೀವ್ರ ಹಾನಿಯಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಇಂತಹ ಪರಿಸರ ಹಾನಿಯನ್ನು ಸರಿಪಡಿಸಲು ದಶಕಗಳೇ ಬೇಕಾಗಬಹುದು ಎಂದಿದ್ದಾರೆ.
ಹಾರ್ಮುಝ್ ಜಲಸಂಧಿ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗ ಮಾತ್ರವಲ್ಲ, ಡಾಲ್ಫಿನ್ ಗಳು, ಸಮುದ್ರ ಆಮೆಗಳು, ಡುಗಾಂಗ್ ಗಳು ಸೇರಿದಂತೆ ಹಲವು ಅಪರೂಪದ ಸಮುದ್ರ ಜೀವಿಗಳ ನೆಲೆಯೂ ಆಗಿದೆ. ಈ ಸಾಹಸದ ವೇಳೆ ಡಾಲ್ಫಿನ್ ಗಳು, ಸಮುದ್ರ ಆಮೆಗಳು ಹಾಗೂ ಮೀನು ಹಿಡಿಯುವ ಹದ್ದುಗಳನ್ನು ಕಂಡಿರುವುದಾಗಿ ಪ್ಯೂ ತಿಳಿಸಿದ್ದಾರೆ.
ಕಳೆದ ಸುಮಾರು ನಾಲ್ಕು ದಶಕಗಳಿಂದ ಪ್ಯೂ ಸಮುದ್ರ ಸಂರಕ್ಷಣೆ ಮತ್ತು ಪರಿಸರ ಜಾಗೃತಿಗಾಗಿ ಉತ್ತರ ಧ್ರುವ, ಅಂಟಾರ್ಕ್ಟಿಕಾ ಸೇರಿದಂತೆ ವಿಶ್ವದ ವಿವಿಧ ಭಾಗಗಳಲ್ಲಿ ಅಪಾಯಕಾರಿ ಈಜು ಸಾಹಸಗಳನ್ನು ನಡೆಸಿದ್ದಾರೆ. 2023ರಲ್ಲಿ ಅಮೆರಿಕದ ಹಡ್ಸನ್ ನದಿಯುದ್ದಕ್ಕೂ ಸುಮಾರು 507 ಕಿ.ಮೀ. ಈಜುವ ಮೂಲಕ ನದಿ ಮಾಲಿನ್ಯದ ವಿರುದ್ಧವೂ ಜಾಗೃತಿ ಮೂಡಿಸಿದ್ದರು.
‘ಯುದ್ಧ ನಿಲ್ಲಬೇಕು, ಹಾರ್ಮುಝ್ ಜಲಸಂಧಿ ಮತ್ತೆ ಸಂಚಾರಕ್ಕೆ ಮುಕ್ತವಾಗಬೇಕು ಮತ್ತು ಮಾಲಿನ್ಯವನ್ನು ಸ್ವಚ್ಛಗೊಳಿಸಬೇಕು’ ಎಂಬುದು ತಮ್ಮ ಅಭಿಯಾನದ ಸಂದೇಶ ಎಂದು ಪ್ಯೂ ಹೇಳಿದ್ದಾರೆ.






