ಷರತ್ತು ಒಪ್ಪಿಕೊಂಡರೆ ಆರು ದಿನಗಳಲ್ಲಿ ಹಾರ್ಮುಝ್ ತೆರವು: ಇರಾನ್

Photo Credit : PTI
ಟೆಹರಾನ್, ಅ.18: ಅಮೆರಿಕವು ಇರಾನ್ನ ಷರತ್ತುಗಳನ್ನು ಒಪ್ಪಿಕೊಂಡರೆ ಆರು ದಿನಗಳ ಒಳಗೆ ಹಾರ್ಮುಝ್ ಜಲಸಂಧಿಯನ್ನು ಮತ್ತೆ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಬಹುದು ಮತ್ತು ಏಳನೇ ದಿನದಂದು ಮಾತುಕತೆಗಳನ್ನು ಪುನರಾರಂಭಿಸಬಹುದು ಎಂದು ಇರಾನ್ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಹೇಳಿದ್ದಾರೆ.
ತನ್ನ ಪ್ರಸ್ತಾಪದ ಕುರಿತು ಅಮೆರಿಕ ನೀಡಿರುವ ಪ್ರತಿಕ್ರಿಯೆಗಳನ್ನು ಇರಾನ್ ಪರಿಶೀಲಿಸುತ್ತಿದೆ. ಪ್ರಸ್ತಾಪ ಇನ್ನೂ ಸಕ್ರಿಯವಾಗಿದೆ ಎಂದು ಅವರು ತಿಳಿಸಿದ್ದಾರೆ.
ಇರಾನ್ ನ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನವನ್ನು ಹಿಂಪಡೆಯುವುದು, ಇರಾನ್ನ ತೈಲ ರಫ್ತಿನ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದು ಮತ್ತು ಪ್ರಾದೇಶಿಕ ಸಂಘರ್ಷಗಳನ್ನು ಅಂತ್ಯಗೊಳಿಸುವುದು ಇರಾನ್ ಮುಂದಿಟ್ಟಿರುವ ಷರತ್ತುಗಳಲ್ಲಿ ಸೇರಿವೆ. ಆದರೆ, ಅಮೆರಿಕ ಈ ಷರತ್ತುಗಳನ್ನು ಒಪ್ಪಿಕೊಂಡಿದೆ ಎಂಬ ಮಾಹಿತಿ ಇಲ್ಲ.
ಈ ಮಧ್ಯೆ, ಅಮೆರಿಕವು ಇರಾನ್ ವಿರುದ್ಧ ಮತ್ತೆ ಮಿಲಿಟರಿ ಕ್ರಮಕ್ಕೆ ಮುಂದಾದರೆ, ಅಮೆರಿಕ ಮತ್ತು ಪಶ್ಚಿಮ ಏಷ್ಯಾದಲ್ಲಿರುವ ಅದರ ಮಿತ್ರರಾಷ್ಟ್ರಗಳು ಅಪಾರ ಹಾನಿ ಅನುಭವಿಸಬೇಕಾಗುತ್ತದೆ ಎಂದು ಇರಾನ್ ನ ರಕ್ಷಣಾ ಸಚಿವ ಮೆಹರ್ದಾದ್ ಅಖ್ಲಾಘಿ ಕೆತಾಬ್ಚಿ ಎಚ್ಚರಿಸಿದ್ದಾರೆ ಎಂದು ವರದಿಯಾಗಿದೆ.




