ಬಿಸಿಗಾಳಿ ಬಲೂನ್ ಪತನ: 4 ಮಂದಿ ಸಾವು

Photo: X \ @KIDataApp
ವಾಷಿಂಗ್ಟನ್: ಅಮೆರಿಕದ ದಕ್ಷಿಣ ಅರಿಝೋನಾ ಮರುಭೂಮಿಯಲ್ಲಿ ಬಿಸಿಗಾಳಿ ಬಲೂನ್ ನೆಲಕ್ಕೆ ಅಪ್ಪಳಿಸಿದ ದುರಂತದಲ್ಲಿ 4 ಮಂದಿ ಮೃತಪಟ್ಟಿದ್ದು ಓರ್ವ ಗಂಭೀರ ಗಾಯಗೊಂಡಿರುವುದಾಗಿ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ದಕ್ಷಿಣ ಅರಿಝೋನಾದ ಎಲಾಯ್ ನಗರದಲ್ಲಿ ರವಿವಾರ ದುರಂತ ಸಂಭವಿಸಿದೆ. ಬಿಸಿಗಾಳಿ ಬಲೂನ್ನಲ್ಲಿ 13 ಮಂದಿ (8 ಸ್ಕೈಡೈವರ್ಗಳು, ಓರ್ವ ಪೈಲಟ್ ಮತ್ತು 4 ಪ್ರಯಾಣಿಕರು) ಇದ್ದರು. ಬಲೂನ್ ನೆಲಕ್ಕೆ ಅಪ್ಪಳಿಸುವುದಕ್ಕೂ ಮುನ್ನ ಎಲ್ಲಾ ಸ್ಕೈಡೈವರ್ ಗಳು ಹೊರಜಿಗಿದಿದ್ದರೆ ನಾಲ್ವರೂ ಪ್ರಯಾಣಿಕರು ಮೃತಪಟ್ಟಿದ್ದಾರೆ. ಪೈಲಟ್ ತೀವ್ರವಾಗಿ ಗಾಯಗೊಂಡಿದ್ದು ತಾಂತ್ರಿಕ ಸಮಸ್ಯೆಯಿಂದ ಬಲೂನ್ ನೆಲಕ್ಕೆ ಅಪ್ಪಳಿಸಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮೃತರಲ್ಲಿ ಒಬ್ಬರನ್ನು ಇಂಡಿಯಾನಾ ರಾಜ್ಯದಲ್ಲಿ ನರ್ಸ್ ಆಗಿರುವ ಕ್ಯಾಟಿ ಬ್ರಾರ್ಟಮ್ ಎಂದು ಗುರುತಿಸಲಾಗಿದ್ದು ಉಳಿದವರ ಗುರುತು ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿ ಬೈರನ್ ಗ್ವಾಲ್ಟ್ನೆ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.





