ಯೆಮೆನ್ ಸೇನಾ ಶಿಬಿರದ ಮೇಲೆ ಹೌತಿಗಳ ಕ್ಷಿಪಣಿ ದಾಳಿ: 53 ಮಂದಿ ಮೃತ್ಯು
ತರಬೇತಿ ಪಡೆಯುತ್ತಿದ್ದ ಹೊಸ ಸೈನಿಕರೇ ಗುರಿ; 200 ಮಂದಿಗೆ ಗಾಯ

Photo credit : thenationalnews
ಶಬ್ವಾ (ಯೆಮೆನ್), ಅ.19: ದಕ್ಷಿಣ ಯೆಮೆನ್ನ ಶಬ್ವಾ ಪ್ರಾಂತ್ಯದಲ್ಲಿರುವ ಸರ್ಕಾರಿ ಸೇನಾ ಶಿಬಿರದ ಮೇಲೆ ಹೌತಿ ಬಂಡುಕೋರರು ನಡೆಸಿದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 53 ಮಂದಿ ಮೃತಪಟ್ಟಿದ್ದು, 200 ಮಂದಿ ಗಾಯಗೊಂಡಿದ್ದಾರೆ ಎಂದು Aljazeera ವರದಿ ಮಾಡಿದೆ.
ಅಲ್-ಅಲಮ್ ಸೇನಾ ಶಿಬಿರದಲ್ಲಿ ಹೊಸದಾಗಿ ನೇಮಕಗೊಂಡ ಸೈನಿಕರಿಗೆ ತರಬೇತಿ ನೀಡಲಾಗುತ್ತಿದ್ದ ಸಂದರ್ಭದಲ್ಲಿ ಈ ದಾಳಿ ನಡೆದಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಗುಂಪು ಮೂರು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಶಿಬಿರದ ಮೇಲೆ ಹಾರಿಸಿದೆ ಎಂದು ಯೆಮೆನ್ ಸರ್ಕಾರಿ ಪಡೆಗಳ ವಕ್ತಾರರು ತಿಳಿಸಿದ್ದಾರೆ.
ದಾಳಿಯ ಬಳಿಕ ಆರಂಭದಲ್ಲಿ 18 ಮಂದಿ ಮೃತಪಟ್ಟಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಯೆಮೆನ್ ಸರ್ಕಾರದ ಅಧಿಕಾರಿಗಳು ಮತ್ತು ವೈದ್ಯಕೀಯ ಮೂಲಗಳು ತಿಳಿಸಿದ್ದವು. ಬಳಿಕ ಸಾವಿನ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ಶಬ್ವಾದ ಸ್ಥಳೀಯ ಆಡಳಿತದ ಪ್ರಕಾರ, ಗಾಯಾಳುಗಳ ಸಂಖ್ಯೆ 200ಕ್ಕೆ ತಲುಪಿದೆ.
ಯೆಮೆನ್ ನಲ್ಲಿ ಮತ್ತೆ ಸಂಘರ್ಷದ ಕಿಡಿ :
ಯೆಮೆನ್ ನಲ್ಲಿ ಸಂಘರ್ಷ ತೀವ್ರಗೊಳ್ಳುತ್ತಿರುವ ನಡುವೆಯೇ ಈ ದಾಳಿ ನಡೆದಿದೆ. ಸೌದಿ ಅರೇಬಿಯ ಬೆಂಬಲಿತ ಸರ್ಕಾರ ಮತ್ತು ಹೌತಿ ಬಂಡುಕೋರರ ನಡುವಿನ ಅಂತರ್ಯುದ್ಧವು 2022ರ ಕದನ ವಿರಾಮದ ಬಳಿಕ ತಗ್ಗಿತ್ತು. ಆದರೆ, ಈ ವರ್ಷ ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಯುದ್ಧದ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಮತ್ತೆ ಹಗೆತನ ಹೆಚ್ಚಾಗಿದೆ.
ಕಳೆದ ತಿಂಗಳು, 'ಅನ್ಸಾರ್ ಅಲ್ಲಾ' (ದೇವರ ಬೆಂಬಲಿಗರು) ಎಂದೂ ಕರೆಯಲ್ಪಡುವ ಹೌತಿಗಳು, ಕೆಂಪು ಸಮುದ್ರದ ಕರಾವಳಿಯಲ್ಲಿರುವ ಸರ್ಕಾರಿ ಪಡೆಗಳ ನಿಯಂತ್ರಣದ ಆಯಕಟ್ಟಿನ ಪ್ರದೇಶಗಳನ್ನು ವಶಪಡಿಸಿಕೊಂಡ ಬಳಿಕ ಸಂಘರ್ಷ ಮತ್ತಷ್ಟು ತೀವ್ರಗೊಂಡಿತು.
ಇದಕ್ಕೆ ಪ್ರತಿಯಾಗಿ, ಸೌದಿ ಅರೇಬಿಯ ಬೆಂಬಲಿತ ಸರ್ಕಾರಿ ಪಡೆಗಳು ಪ್ರತಿದಾಳಿ ನಡೆಸಿ, 'ಡಾನ್ ಆಫ್ ಯೆಮೆನ್' (ಯೆಮೆನ್ನ ಉದಯ) ಎಂಬ ಕಾರ್ಯಾಚರಣೆಯನ್ನು ಆರಂಭಿಸಿದವು. 2014ರಲ್ಲಿ ಹೌತಿಗಳು ವಶಪಡಿಸಿಕೊಂಡಿದ್ದ ರಾಜಧಾನಿ ಸನಾ ಸೇರಿದಂತೆ, ಅವರ ನಿಯಂತ್ರಣದಲ್ಲಿರುವ ಪ್ರದೇಶಗಳನ್ನು ಮರಳಿ ವಶಪಡಿಸಿಕೊಳ್ಳುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ.
ಇದೇ ವೇಳೆ, ಹೌತಿಗಳು ಸೌದಿ ಅರೇಬಿಯದ ಮೇಲಿನ ದಾಳಿಗಳನ್ನು ತೀವ್ರಗೊಳಿಸಿದ್ದಾರೆ. ರಿಯಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಸೌದಿ ಸರಕಾರಿ ತೈಲ ಕಂಪೆನಿ ಅರಾಮ್ಕೊ ಮೇಲಿನ ದಾಳಿಗಳೂ ಇದರಲ್ಲಿ ಸೇರಿವೆ. ಸೋಮವಾರ ಸೌದಿ ಅಧಿಕಾರಿಗಳು ರಾಜಧಾನಿ ರಿಯಾದ್ ನ ನಿವಾಸಿಗಳಿಗೆ 'ಶತ್ರುತ್ವದ ವೈಮಾನಿಕ ಬೆದರಿಕೆ'ಯ ಕುರಿತು ಎಚ್ಚರಿಕೆ ನೀಡಿದ್ದಾರೆ.
'ದೃಢವಾದ ಪ್ರತಿಕ್ರಿಯೆ'ಯ ಎಚ್ಚರಿಕೆ :
ಯೆಮೆನ್ ಅಧ್ಯಕ್ಷೀಯ ನಾಯಕತ್ವ ಮಂಡಳಿಯ ಮುಖ್ಯಸ್ಥ ರಶಾದ್ ಅಲ್-ಅಲಿಮಿ ಅವರು, ಶಬ್ವಾದಲ್ಲಿ ಮೃತಪಟ್ಟವರು ಹೊಸದಾಗಿ ನೇಮಕಗೊಂಡ ಸೈನಿಕರು ಎಂದು ತಿಳಿಸಿದ್ದಾರೆ. ದಾಳಿಗೆ 'ದೃಢವಾದ ಪ್ರತಿಕ್ರಿಯೆ' ನೀಡುವುದಾಗಿ ಅವರು ಎಚ್ಚರಿಸಿದ್ದಾರೆ.
'ಹೊಸದಾಗಿ ನೇಮಕಗೊಂಡ ಸೈನಿಕರನ್ನು ಗುರಿಯಾಗಿಸಿಕೊಂಡಿರುವುದು, ಒತ್ತಡಕ್ಕೆ ಸಿಲುಕಿದಾಗ ಹೌತಿ ಬಣವು ಭಯೋತ್ಪಾದಕ ದಾಳಿಗಳಿಗೆ ಮೊರೆಹೋಗುತ್ತದೆ ಎಂಬುದನ್ನು ತೋರಿಸುತ್ತದೆ' ಎಂದು ಅವರು ಹೇಳಿದ್ದಾರೆ.
ಸನಾದಿಂದ ವರದಿ ಮಾಡಿರುವ ಅಲ್ ಜಝೀರಾದ ಯೂಸೆಫ್ ಮಾವ್ರಿ, ಈ ದಾಳಿಯ ಹೊಣೆಯನ್ನು ಹೌತಿಗಳು ಹೊತ್ತುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಸೌದಿ ಬೆಂಬಲಿತ ಯೆಮೆನ್ ಸರ್ಕಾರಿ ಪಡೆಗಳ ಮಿಲಿಟರಿ ನೆಲೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಹೌತಿಗಳು ಹೇಳಿಕೊಂಡಿದ್ದಾರೆ. ಸೌದಿ ಬೆಂಬಲಿತ ಸೇನಾ ಪಡೆಗಳ ಉಪಸ್ಥಿತಿಯಿರುವ ಯಾವುದೇ ಸ್ಥಳವನ್ನು ನ್ಯಾಯಸಮ್ಮತ ಗುರಿಯಾಗಿ ಪರಿಗಣಿಸುವುದಾಗಿ ಹೌತಿ ವಕ್ತಾರ ಯಾಹ್ಯಾ ಸರೀ ತಿಳಿಸಿದ್ದಾರೆ.
ಇತ್ತ, ತೈಝ್ ನ ದಕ್ಷಿಣ ಭಾಗದಲ್ಲಿರುವ ಅಲ್-ಅಕ್ರೂದ್, ಅಲ್-ಶಕಾಬ್ ಮತ್ತು ಅಲ್-ಸರಾರಿ ಪ್ರದೇಶಗಳಲ್ಲಿ ಹೌತಿ ಬಂಡುಕೋರರ ಗುಂಪುಗಳು, ವಾಹನಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವುದಾಗಿ ಯೆಮೆನ್ ಸರ್ಕಾರಿ ಪಡೆಗಳು ತಿಳಿಸಿವೆ. ಇಂಧನ ಕೊರತೆ ಮತ್ತು ಗಗನಕ್ಕೇರುತ್ತಿರುವ ಬೆಲೆಗಳಿಂದ ಈ ಪ್ರದೇಶದ ಜನರು ಈಗಾಗಲೇ ಸಂಕಷ್ಟ ಎದುರಿಸುತ್ತಿದ್ದಾರೆ.
ಸಂಘರ್ಷದ ವಿಸ್ತರಣೆಯ ಆತಂಕ :
ಅಡೆನ್ ವಿಮಾನ ನಿಲ್ದಾಣದ ಮೇಲೆ ಹೌತಿಗಳು ಎರಡು ಕ್ಷಿಪಣಿಗಳನ್ನು ಹಾರಿಸಿದ್ದಾರೆ ಎಂದು ಯೆಮೆನ್ ಸರ್ಕಾರ ಅಕ್ಟೋಬರ್ 16ರಂದು ತಿಳಿಸಿತ್ತು. ಮಾರಿಬ್ನಲ್ಲಿ ಸರ್ಕಾರಿ ಪಡೆಗಳು ಮುನ್ನಡೆ ಸಾಧಿಸಿದ್ದು, ಕಳೆದ 24 ಗಂಟೆಗಳಲ್ಲಿ 430 ಹೌತಿ ಹೋರಾಟಗಾರರನ್ನು ಹತ್ತಿಕ್ಕಿರುವುದಾಗಿ ಹೇಳಿಕೊಂಡಿವೆ.
ಇದೇ ವೇಳೆ, ಸೌದಿ ಬೆಂಬಲಿತ ಯೆಮೆನ್ ಸರ್ಕಾರಕ್ಕೆ ನಿಷ್ಠರಾಗಿದ್ದ 159 ಯುದ್ಧ ಕೈದಿಗಳನ್ನು ಹೌತಿಗಳು ಏಕಪಕ್ಷೀಯವಾಗಿ ಬಿಡುಗಡೆ ಮಾಡಿದ್ದಾರೆ ಎಂದು ಹೌತಿಗಳ ಯುದ್ಧ ಕೈದಿಗಳ ವ್ಯವಹಾರಗಳ ಸಮಿತಿಯ ಮುಖ್ಯಸ್ಥ ಅಬ್ದುಲ್-ಖಾದರ್ ಅಲ್-ಮುರ್ತಾದಾ ಅಕ್ಟೋಬರ್ 17ರಂದು ತಿಳಿಸಿದ್ದಾರೆ.
ಯೆಮೆನ್ ನಲ್ಲಿ ಸುಮಾರು ಒಂದು ದಶಕದಿಂದ ನಡೆಯುತ್ತಿರುವ ಸಂಘರ್ಷವು ದೇಶವನ್ನು ತೀವ್ರ ಮಾನವೀಯ ಬಿಕ್ಕಟ್ಟಿಗೆ ತಳ್ಳಿದೆ. ಇರಾನ್ ಬೆಂಬಲಿತ ಹೌತಿ ಬಂಡುಕೋರರು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಸರ್ಕಾರವನ್ನು ಬೆಂಬಲಿಸುವ ಸೌದಿ ನೇತೃತ್ವದ ಪಡೆಗಳ ನಡುವಿನ ಹೋರಾಟದಿಂದ ಲಕ್ಷಾಂತರ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.






