ಸರಕು ನೌಕೆಯ ಮೇಲೆ ಹೌದಿ ಕ್ಷಿಪಣಿ ದಾಳಿ | ಓರ್ವನಿಗೆ ಗಾಯ
ಸಾಂದರ್ಭಿಕ ಚಿತ್ರ Photo : NDTV
ಸನಾ: ಏಡನ್ ಕೊಲ್ಲಿಯಲ್ಲಿ ಸಾಗುತ್ತಿದ್ದ ಸರಕು ನೌಕೆಯ ಮೇಲೆ ಯೆಮನ್ನ ಹೌದಿ ಬಂಡುಗೋರರು ಎರಡು ಹಡಗು-ವಿರೋಧಿ ಕ್ರೂಸ್ ಕ್ಷಿಪಣಿಗಳನ್ನು ಪ್ರಯೋಗಿಸಿದ್ದು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ದಾಳಿಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಪಿಟಿಐ ವರದಿ ಮಾಡಿದೆ.
ಪಲಾವು ದೇಶದ ಧ್ವಜ ಹೊಂದಿರುವ, ಉಕ್ರೇನಿಯನ್ ಮಾಲಕತ್ವದ, ಪೋಲ್ಯಾಂಡ್ನ ಪ್ರಜೆ ನಿರ್ವಹಿಸುವ ವೆರ್ಬೆನಾ ಸರಕು ನೌಕೆಯು ಮಲೇಶ್ಯಾದಿಂದ ಇಟಲಿಗೆ ಮರವನ್ನು ಸಾಗಿಸುತ್ತಿತ್ತು. ಗುರುವಾರ ಕೆಂಪು ಸಮುದ್ರದ ಏಡನ್ ಕೊಲ್ಲಿಯ ಬಳಿ ಸಾಗುತ್ತಿದ್ದಾಗ ಹೌದಿಗಳು ಪ್ರಯೋಗಿಸಿದ ಎರಡು ಕ್ರೂಸ್ ಕ್ಷಿಪಣಿಗಳು ಅಪ್ಪಳಿಸಿ ಹಾನಿಯಾಗಿದ್ದು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಓರ್ವ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾನೆ ಎಂದು ವರದಿಯಾಗಿದೆ. ಗುರುವಾರ ಕೆಂಪು ಸಮುದ್ರದಲ್ಲಿ ಹೌದಿಗಳ ಡ್ರೋನ್ ಬೋಟ್(ಸಿಬಂದಿ ರಹಿತ, ರಿಮೋಟ್ ಕಂಟ್ರೋಲ್ ಬೋಟ್), ಡ್ರೋನ್ ಮತ್ತು ಎರಡು ಗಸ್ತು ದೋಣಿಗಳನ್ನು ನಾಶಗೊಳಿಸಿರುವುದಾಗಿ ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿದೆ.