ಪವಿತ್ರ ನಗರ ಮಕ್ಕಾಗೆ ಬೆದರಿಕೆ ಹಾಕಿಲ್ಲ; ಹೂತಿಗಳಿಂದ ಸ್ಪಷ್ಟನೆ
‘ಮಕ್ಕಾ ಗುರಿಯಾಗಿಸಿಕೊಂಡಿರುವುದಾಗಿ ಸೌದಿ ಸುಳ್ಳು ಪ್ರಚಾರ ಮಾಡುತ್ತಿದೆ’; ತೈಲ ಘಟಕ, ಸೇನಾ ನೆಲೆಗಳೇ ನಮ್ಮ ಗುರಿ: ಯಾಹ್ಯಾ ಸಾರಿ

ಸಾಂದರ್ಭಿಕ ಚಿತ್ರ
ಸನಾ(ಯೆಮೆನ್): ಸೌದಿ ಅರೇಬಿಯಾದ ಪವಿತ್ರ ನಗರ ಮಕ್ಕಾಗೆ ಯಾವುದೇ ಬೆದರಿಕೆ ಇಲ್ಲ ಎಂದು ಹೂತಿ ಮಿಲಿಟರಿ ವಕ್ತಾರ ಯಾಹ್ಯಾ ಸಾರಿ ಹೇಳಿದ್ದಾರೆ. ಮಕ್ಕಾ ಪ್ರಾಂತ್ಯಕ್ಕೆ ಅಪಾಯದ ಎಚ್ಚರಿಕೆ ನೀಡಿದ್ದ ಸೌದಿ ಅರೇಬಿಯಾ, ಕೆಲವೇ ಕ್ಷಣಗಳಲ್ಲಿ ಅದನ್ನು ಹಿಂಪಡೆದ ಬಳಿಕ ಹೂತಿಗಳು ಈ ಸ್ಪಷ್ಟನೆ ನೀಡಿದ್ದಾರೆ ಎಂದು Aljazeera ವರದಿ ಮಾಡಿದೆ.
ಸೌದಿ ಅರೇಬಿಯಾ ಸ್ಥಳೀಯ ಕಾಲಮಾನ 20:40 ವೇಳೆಗೆ ಮಕ್ಕಾ ಪ್ರಾಂತ್ಯಕ್ಕೆ ಅಪಾಯದ ಎಚ್ಚರಿಕೆ ನೀಡಿತ್ತು. ಆದರೆ, ಕೆಲವೇ ಕ್ಷಣಗಳಲ್ಲಿ ಅದನ್ನು ಹಿಂಪಡೆಯಿತು. ಈ ಕುರಿತು ತಮ್ಮ ಟೆಲಿಗ್ರಾಮ್ ಚಾನೆಲ್ ನಲ್ಲಿ ಹೇಳಿಕೆ ನೀಡಿರುವ ಯಾಹ್ಯಾ ಸಾರಿ, 'ಮಕ್ಕಾಗೆ ಯಾವುದೇ ಬೆದರಿಕೆ ಹಾಕಿಲ್ಲ' ಎಂದು ತಿಳಿಸಿದ್ದಾರೆ.
'ಯೆಮೆನ್ ನ ಜನರು ಮಕ್ಕಾ ಮತ್ತು ಎಲ್ಲ ಇಸ್ಲಾಮಿಕ್ ಪವಿತ್ರ ಸ್ಥಳಗಳನ್ನು ಪವಿತ್ರವೆಂದು ಪರಿಗಣಿಸುತ್ತಾರೆ. ಮಕ್ಕಾ ಪ್ರದೇಶಕ್ಕೆ ಬೆದರಿಕೆ ಇದೆ ಎಂದು ಹೇಳುವ ಮೂಲಕ ಸೌದಿ ಅರೇಬಿಯಾ ದೊಡ್ಡ ಸುಳ್ಳನ್ನು ಪ್ರಚಾರ ಮಾಡುತ್ತಿದೆ. ನಮ್ಮ ಕಾರ್ಯಾಚರಣೆಗಳು ಅದರ ತೈಲ ಸೌಲಭ್ಯಗಳು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿವೆ' ಎಂದು ಅವರು ಹೇಳಿದ್ದಾರೆ.
ಯೆಮೆನ್ ನ ಸೌದಿ ಬೆಂಬಲಿತ, ಅಂತರರಾಷ್ಟ್ರೀಯ ಮಾನ್ಯತೆ ಪಡೆದ ಸರ್ಕಾರದ ವಿರುದ್ಧ ಹೋರಾಡುತ್ತಿರುವ ಇರಾನ್ ಬೆಂಬಲಿತ ಹೂತಿಗಳು, ಇಸ್ಲಾಂನ ಪವಿತ್ರ ನಗರ ಮಕ್ಕಾವನ್ನು ಗುರಿಯಾಗಿಸಿಕೊಂಡಿರುವುದನ್ನು ಪದೇ ಪದೇ ನಿರಾಕರಿಸಿದ್ದಾರೆ. ಆದರೆ, ಇತ್ತೀಚಿನ ತಿಂಗಳುಗಳಲ್ಲಿ ಮಕ್ಕಾ ಕಡೆಗೆ ಹಾರಿಸಲಾದ ಹಲವು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಸೌದಿ ಅರೇಬಿಯಾ ತಡೆಹಿಡಿದಿದೆ ಎಂದು ವರದಿಯಾಗಿದೆ.
ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಲ್ಲಿ ಕೆಲಕಾಲ ಸಂಘರ್ಷ ಕಡಿಮೆಯಾಗಿದ್ದ ಬಳಿಕ, ಜುಲೈನಲ್ಲಿ ಹೂತಿಗಳು ಮತ್ತು ಯೆಮೆನ್ ಸರ್ಕಾರಕ್ಕೆ ನಿಷ್ಠರಾಗಿರುವ ಪಡೆಗಳ ನಡುವಿನ ಹೋರಾಟ ಮತ್ತೆ ತೀವ್ರಗೊಂಡಿತ್ತು.






