ಬಾಬ್ ಅಲ್-ಮಂದೇಬ್ ಜಲಸಂಧಿಯಲ್ಲಿ ಹಡಗುಗಳಿಗೆ ಶುಲ್ಕ ವಿಧಿಸಲು ಹೌದಿಗಳ ಚಿಂತನೆ

Photo Credit : aljazeera.com
ಸನಾ, ಜು.30: ದಕ್ಷಿಣ ಕೆಂಪು ಸಮುದ್ರವನ್ನು ಏಡನ್ ಕೊಲ್ಲಿಯೊಂದಿಗೆ ಜೋಡಿಸುವ ಪ್ರಮುಖ ಸಾಗರ ಮಾರ್ಗವಾದ ಬಾಬ್ ಅಲ್-ಮಂದೇಬ್ ಜಲಸಂಧಿಯ ಮೂಲಕ ಹಾದುಹೋಗುವ ವಾಣಿಜ್ಯ ಹಡಗುಗಳ ಮೇಲೆ ಸಾರಿಗೆ ಶುಲ್ಕವನ್ನು ವಿಧಿಸಲು ಯೆಮನ್ನ ಇರಾನ್ ಬೆಂಬಲಿತ ಹೌದಿ ಬಂಡುಕೋರರು ಚಿಂತನೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಹೌದಿಗಳು ಕಳೆದ ವಾರ ಸೌದಿ ಅರೇಬಿಯಾ ವಿರುದ್ಧ ಸಾಗರ ದಿಗ್ಬಂಧನವನ್ನು ಘೋಷಿಸಿದ ನಂತರ ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಾಗಿದೆ.
ಇತ್ತೀಚೆಗೆ ಇರಾನ್ಗೆ ಭೇಟಿ ನೀಡಿದ್ದ ಹೌದಿ ಪ್ರತಿನಿಧಿಗಳೊಂದಿಗೆ ಈ ವಿಚಾರವನ್ನು ಇರಾನ್ ಅಧಿಕಾರಿಗಳು ಚರ್ಚಿಸಿದ್ದಾರೆ . ಬಾಬ್ ಅಲ್-ಮಂದೇಬ್ ಮೂಲಕ ಹಾದುಹೋಗುವ ಸಾರಿಗೆ ಶುಲ್ಕವನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಒಂದು ನಿಯಂತ್ರಣ ಮಂಡಳಿಯನ್ನು ಸ್ಥಾಪಿಸುವ ಬಗ್ಗೆಯೂ ಇರಾನ್ ಅಧಿಕಾರಿಗಳು ಹೌದಿಗಳಿಗೆ ಸಲಹೆ ನೀಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಈ ಪ್ರಸ್ತಾವನೆಯಡಿ, ಚೀನಾ ಹಡಗುಗಳಿಗೆ ಶುಲ್ಕದಿಂದ ವಿನಾಯಿತಿ ದೊರಕಬಹುದು. ದಕ್ಷಿಣ ಕೆಂಪು ಸಮುದ್ರದ ಮೂಲಕ ತನ್ನ ವಾಣಿಜ್ಯ ಮತ್ತು ಇಂಧನ ಸರಕುಗಳ ಸಾಗಣೆಗೆ ಯಾವುದೇ ದಾಳಿ ಎದುರಾಗದಂತೆ ನೋಡಿಕೊಳ್ಳಲು ಚೀನಾ ಇತ್ತೀಚಿನ ತಿಂಗಳುಗಳಲ್ಲಿ ಹೌದಿ ಸಂಘಟನೆಯೊಂದಿಗೆ ನೇರ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ. ಚೀನಾವು ಸೌದಿ ಕಚ್ಚಾ ತೈಲದ ವಿಶ್ವದ ಅತಿ ದೊಡ್ಡ ಆಮದುದಾರ ದೇಶವಾಗಿದೆ.




