AI ಬಳಸಿ ಯೆಮೆನ್ ಕಮಾಂಡರ್ ಧ್ವನಿ ನಕಲು ಮಾಡಿ NRF ಪಡೆಗಳನ್ನು ಹಿಂದಕ್ಕೆ ಸರಿಯುವಂತೆ ಮಾಡಿದ ಹೌದಿಗಳು: ವರದಿ

Photo: x.com/english_ritam
ಸನಾ: ಕೆಂಪು ಸಮುದ್ರದ ತೀರದಲ್ಲಿರುವ ಯೆಮೆನ್ ನ ಆಯಕಟ್ಟಿನ ಬಂದರು ನಗರ ಮೊಚಾವನ್ನು ಹೌದಿ ಬಂಡುಕೋರರು ವಶಪಡಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಬೆಂಬಲಿತ ಯೆಮೆನ್ನ ‘ನ್ಯಾಷನಲ್ ರೆಸಿಸ್ಟೆನ್ಸ್ ಫೋರ್ಸಸ್ (NRF)’ ಪಡೆಯನ್ನು ಹಿಂದಕ್ಕೆ ಸರಿಯುವಂತೆ ವಂಚಿಸಲು ಹೌದಿಗಳು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವನ್ನು ಬಳಸಿದ್ದಾರೆ ಎಂದು ವರದಿಯಾಗಿದೆ.
ಯೆಮೆನ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ತಾರೆಕ್ ಮುಹಮ್ಮದ್ ಅಬ್ದುಲ್ಲಾ ಸಾಲೆಹ್ ಅವರ ಧ್ವನಿಯನ್ನು ಹೋಲುವಂತೆ ಎಐ ಮೂಲಕ ನಕಲಿ ಧ್ವನಿಯನ್ನು ಸೃಷ್ಟಿಸಿ, ಅದನ್ನು ಬಳಸಿ ನ್ಯಾಷನಲ್ ರೆಸಿಸ್ಟೆನ್ಸ್ ಫೋರ್ಸಸ್ ಪಡೆಯನ್ನು ಹಿಂದಕ್ಕೆ ಸರಿಯುವಂತೆ ಹೌದಿಗಳು ವಂಚಿಸಿದ್ದಾರೆ ಎನ್ನಲಾಗಿದೆ.
ಇರಾನ್ ಬೆಂಬಲಿತ ಹೌದಿ ಪಡೆಗಳು ಗುರುವಾರ ಕೆಂಪು ಸಮುದ್ರ ತೀರದ ಪ್ರಮುಖ ನಗರವಾದ ಮೊಚಾವನ್ನು ವಶಪಡಿಸಿಕೊಂಡವು. ತೀವ್ರ ಸಂಘರ್ಷದ ಬಳಿಕ ಜನರಲ್ ಸಾಲೆಹ್ ನೇತೃತ್ವದ ಪಡೆಗಳು ಹಿಮ್ಮೆಟ್ಟಿದ ಬೆನ್ನಲ್ಲೇ ಈ ವರದಿಗಳು ಮುನ್ನೆಲೆಗೆ ಬಂದಿವೆ.
ದಾಳಿಯ ಸಂದರ್ಭದಲ್ಲಿ ಜನರಲ್ ಸಾಲೆಹ್ ಅವರ ಧ್ವನಿಯನ್ನು ಹೋಲುವ ಆಡಿಯೊ ಸಂದೇಶವೊಂದು ಸೈನಿಕರಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಸೈನಿಕರಲ್ಲಿ ಗೊಂದಲ ಮೂಡಿಸಿ, ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಉದ್ದೇಶದಿಂದ ಹೌದಿಗಳು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಬಳಸಿ ಸಾಲೆಹ್ ಅವರ ಧ್ವನಿಯನ್ನು ಕ್ಲೋನ್ ಮಾಡಿದ್ದಾರೆ ಎಂದು ಅವರ ಪಡೆ ಆರೋಪಿಸಿದೆ.
ಉತ್ತರ ಯೆಮೆನ್ನಲ್ಲಿರುವ ಶಸ್ತ್ರಾಸ್ತ್ರ ಅಭಿವೃದ್ಧಿ ಘಟಕವೊಂದು ಕ್ಷಿಪಣಿ ಮಾರ್ಗದರ್ಶನ ಸಾಫ್ಟ್ವೇರ್ಗಾಗಿ ‘ಆಂಥ್ರೊಪಿಕ್’ ಸಂಸ್ಥೆಯ ‘ಕ್ಲೌಡ್’ (Claude) ಎಐ ಮಾದರಿಯನ್ನು ಬಳಸಿಕೊಂಡಿದೆ ಎಂದು ಸಂಸ್ಥೆ ಬಹಿರಂಗಪಡಿಸಿದ ಬೆನ್ನಲ್ಲೇ ಈ ಹೊಸ ಆರೋಪ ಮುನ್ನೆಲೆಗೆ ಬಂದಿದೆ.
ಮೊಚಾ ಮೂಲದ ‘ಅಲ್-ಜೌಮ್ಹೂರಿಯಾ ಟಿವಿ’ (Aljoumhouriya TV) ಕೂಡ ಹೌದಿಗಳು ಸೈನಿಕರ ಧೈರ್ಯ ಕುಗ್ಗಿಸುವ ಉದ್ದೇಶದಿಂದ ಜನರಲ್ ಸಾಲೆಹ್ ಅವರ ಧ್ವನಿಯನ್ನು ಕ್ಲೋನ್ ಮಾಡಿ, ಅವರನ್ನು ವಂಚಿಸಲು ವಿಫಲ ಯತ್ನ ನಡೆಸಿದ್ದಾರೆ ಎಂದು ದೃಢಪಡಿಸಿದೆ.
ಸಾಲೆಹ್ ಪಡೆಗಳ ನೆಲೆಗಳತ್ತ ಹೌದಿಗಳು ಮುನ್ನುಗ್ಗುತ್ತಿದ್ದ ವೇಳೆ ಈ ಆಡಿಯೊ ಹೊರಬಿದ್ದಿದೆ. ಅದರಲ್ಲಿ ಜನರಲ್ ಸಾಲೆಹ್ ಅವರೇ ಮೊಚಾದಿಂದ ಪಡೆಗಳು ಹಿಂದಕ್ಕೆ ಸರಿಯುವಂತೆ ಆದೇಶ ನೀಡುತ್ತಿರುವಂತೆ ಬಿಂಬಿಸಲಾಗಿತ್ತು. ಸುಮಾರು ಐದು ಲಕ್ಷ ಅನುಯಾಯಿಗಳನ್ನು ಹೊಂದಿರುವ ಯೆಮೆನ್ನ ಸಾಮಾಜಿಕ ಹೋರಾಟಗಾರ ಆದಿಲ್ ಅಲ್-ಹಸನಿ ಈ ಆಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದರಿಂದ ಅದು ಕ್ಷಿಪ್ರವಾಗಿ ಸೈನಿಕರನ್ನು ತಲುಪಿತು ಎಂದು ಮುಕ್ತ ಮೂಲಗಳ ಗುಪ್ತಚರ ಸಂಸ್ಥೆ ‘ಬಾಶಾ ರಿಪೋರ್ಟ್’ ತಿಳಿಸಿದೆ.
ಆಡಿಯೊ ಮಾತ್ರವಲ್ಲದೆ, ಸೆಪ್ಟೆಂಬರ್ 10ರಂದು ಮುಂಜಾನೆ 2 ಗಂಟೆಯ ಸುಮಾರಿಗೆ ಪಶ್ಚಿಮ ಕರಾವಳಿಯ ಸೈನಿಕರಿಗೆ ಹೌದಿ ಪಡೆಗಳು ಸಂದೇಶಗಳನ್ನು ಕಳುಹಿಸಿ, ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾದರೆ ಕ್ಷಮಾದಾನ ನೀಡುವುದಾಗಿ ಆಮಿಷವೊಡ್ಡಿದ್ದವು ಎನ್ನಲಾಗಿದೆ.
ಈ ಆಡಿಯೊ ಹಾಗೂ ಸಂದೇಶಗಳು ಸೈನಿಕರ ನೈತಿಕ ಸ್ಥೈರ್ಯವನ್ನು ಕುಗ್ಗಿಸಿ, ಅವರನ್ನು ಶರಣಾಗುವಂತೆ ಮಾಡುವ ಉದ್ದೇಶದ ಮಾನಸಿಕ ಯುದ್ಧತಂತ್ರದ ಭಾಗವಾಗಿದ್ದವು ಎಂದು ವಿಶ್ಲೇಷಿಸಲಾಗಿದೆ.
ಇದು ತಿರುಚಿದ ಆಡಿಯೊ ಎಂದ ಸಾಲೆಹ್ ಪಡೆಗಳು
ತಾರೆಕ್ ಸಾಲೆಹ್ ಅವರ ಅಧಿಕೃತ ಮಾಧ್ಯಮ ವಿಭಾಗವು ಈ ಆಡಿಯೊವನ್ನು ಸಂಪೂರ್ಣ ನಕಲಿ ಹಾಗೂ ಹೌದಿಗಳ ಸೃಷ್ಟಿ ಎಂದು ಸ್ಪಷ್ಟಪಡಿಸಿದೆ.
ಸಾಲೆಹ್ ಅವರ ಅಧಿಕೃತ ಹೇಳಿಕೆಗಳು ಮತ್ತು ನಿಲುವುಗಳು ಕೇವಲ ನ್ಯಾಷನಲ್ ರೆಸಿಸ್ಟೆನ್ಸ್ನ ಅಧಿಕೃತ ಮಿಲಿಟರಿ ಚಾನೆಲ್ಗಳ ಮೂಲಕವೇ ಪ್ರಕಟವಾಗುತ್ತವೆ ಎಂದು ತಿಳಿಸಿದೆ.
ಇತರ ಯಾವುದೇ ಮೂಲಗಳಿಂದ ಬರುವ ಇಂತಹ ಸಂದೇಶಗಳನ್ನು ಸೈನಿಕರು ನಂಬಬಾರದು ಎಂದು ಪಡೆಗಳು ಎಚ್ಚರಿಕೆ ನೀಡಿವೆ.






