ಮಿಲಿಟರಿ ಹಸ್ತಕ್ಷೇಪ ನಡೆಸಿದರೆ ತೀವ್ರ ಪ್ರತಿಕ್ರಮ; ಪಾಕಿಸ್ತಾನ, ತುರ್ಕಿಯೆಗೆ ಹೌದಿಗಳ ಎಚ್ಚರಿಕೆ

Photo Credit : AP
ಸನಾ, ಸೆ. 20: ಸೌದಿ ಅರೇಬಿಯಾದ ಬೆಂಬಲಕ್ಕೆ ಪಡೆಗಳನ್ನು ನಿಯೋಜಿಸದಂತೆ ಅಥವಾ ಮಿಲಿಟರಿ ಹಸ್ತಕ್ಷೇಪ ಮಾಡದಂತೆ ಯಮನ್ನ ಹೌದಿ ಗುಂಪು ಪಾಕಿಸ್ತಾನ ಮತ್ತು ತುರ್ಕಿಯೆ ವಿರುದ್ಧ ಸ್ಪಷ್ಟ ಮಿಲಿಟರಿ ಬೆದರಿಕೆಯನ್ನು ಒಡ್ಡಿದೆ.
ಸೌದಿ ಅರೇಬಿಯಾ, ಪಾಕಿಸ್ತಾನ ಮತ್ತು ತುರ್ಕಿಯೆ ನಡುವೆ ಆಗಸ್ಟ್ನಲ್ಲಿ ಸಹಿ ಮಾಡಲಾದ ತ್ರಿಪಕ್ಷೀಯ ಜಂಟಿ ಭದ್ರತಾ ಒಪ್ಪಂದವಾದ ‘ಮಕ್ಕಾ ಜಂಟಿ ರಕ್ಷಣಾ ಒಪ್ಪಂದ’ವನ್ನು ಸಕ್ರಿಯಗೊಳಿಸುವ ಸಂಭಾವ್ಯತೆಯ ಕುರಿತು ಪಾಕಿಸ್ತಾನಿ ರಕ್ಷಣಾ ಅಧಿಕಾರಿಗಳ ಸಾರ್ವಜನಿಕ ಹೇಳಿಕೆಗಳ ಬೆನ್ನಲ್ಲೇ ಈ ಎಚ್ಚರಿಕೆ ಬಂದಿದೆ.
ಇಸ್ಲಾಮಾಬಾದ್ ಅಥವಾ ಅಂಕಾರಾದಿಂದ ಯಾವುದೇ ನೇರ ಮಿಲಿಟರಿ ಹಸ್ತಕ್ಷೇಪ ನಡೆದರೆ, ಅದು ಎರಡೂ ದೇಶಗಳ ವಿರುದ್ಧ ತೀವ್ರ ಮತ್ತು ತಕ್ಷಣದ ಮಿಲಿಟರಿ ಪ್ರತೀಕಾರಕ್ಕೆ ಕಾರಣವಾಗುತ್ತದೆ ಎಂದು ಹೌದಿಗಳ ಹಿರಿಯ ಅಧಿಕಾರಿಯೊಬ್ಬರು ರವಿವಾರ ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
‘ಸೌದಿ ನೇತೃತ್ವದ ಮಿಲಿಟರಿ ಕಾರ್ಯಾಚರಣೆಗಳು ಮತ್ತು ಆರ್ಥಿಕ ದಿಗ್ಬಂಧನಗಳ ವಿರುದ್ಧ ನಾವು ರಕ್ಷಣಾತ್ಮಕ ಪ್ರತಿಕ್ರಮ ನಡೆಸಿದ್ದೇವೆ. ಆದರೂ, ಪಾಕಿಸ್ತಾನ ಅಥವಾ ತುರ್ಕಿಯೆ ಪಡೆಗಳು ಸೌದಿಯ ಜೊತೆಗೆ ದಾಳಿಗೆ ಕೈಜೋಡಿಸಿದರೆ, ನಾವು ‘ಕಬ್ಬಿಣದ ಮುಷ್ಟಿ’ಯಿಂದ ಪ್ರತಿದಾಳಿ ನಡೆಸುತ್ತೇವೆ. ಸಂಘರ್ಷಕ್ಕೆ ಧುಮುಕುವ ಯಾವುದೇ ವಿದೇಶಿ ಶಕ್ತಿಯನ್ನು ಶಿಕ್ಷೆಗೆ ಒಳಪಡಿಸುತ್ತೇವೆ. ನಾವು ಯಾವುದೇ ದೇಶದ ವಿರುದ್ಧ ಶತ್ರುತ್ವದ ಉದ್ದೇಶವನ್ನು ಹೊಂದಿಲ್ಲ. ಸೌದಿ ಒಕ್ಕೂಟಕ್ಕೆ ಮಿಲಿಟರಿ ಪ್ರಾತಿನಿಧಿಕ ಪಡೆಗಳಾಗಿ ಕಾರ್ಯನಿರ್ವಹಿಸುವ ಬದಲು ಎರಡೂ ಶಕ್ತಿಗಳು ತಟಸ್ಥ ನಿಲುವು ತಳೆಯುವುದು ಒಳಿತು’ ಎಂದು ಅವರು ಹೇಳಿದ್ದಾರೆ.






