ಟ್ರಂಪ್-ಝೆಲೆನ್ಸ್ಕಿ ನಡುವೆ ಮಾತಿನ ಚಕಮಕಿ: ಅಮೆರಿಕ ಬೆಂಬಲಕ್ಕೆ ನಿಂತ ರಶ್ಯ

Photo : AFP
ಮಾಸ್ಕೊ: ಶುಕ್ರವಾರ ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ನಡುವೆ ಮಾತಿನ ಚಕಮಕಿ ನಡೆದ ಬೆನ್ನಿಗೇ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ರಶ್ಯ ಬೆಂಬಲ ವ್ಯಕ್ತಪಡಿಸಿದೆ. ಝೆಲೆನ್ಸ್ಕಿ ಜೊತೆಗಿನ ಮಾತುಕತೆಯ ಸಂದರ್ಭದಲ್ಲಿ ಡೊನಾಲ್ಡ್ ಟ್ರಂಪ್ ಪ್ರದರ್ಶಿಸಿದ ನಿಲುವನ್ನು ರಶ್ಯ ನಾಯಕರು ಹಾಗೂ ಅಲ್ಲಿನ ಮಾಧ್ಯಮಗಳು ಶ್ಲಾಘಿಸಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ರಶ್ಯ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಝಖರೋವಾ, ಮಾತಿನ ಚಕಮಕಿಯ ವೇಳೆ ಝೆಲೆನ್ಸ್ಕಿ ಮೇಲೆ ದೈಹಿಕ ದಾಳಿ ನಡೆಸಬೇಕಾದ ಸನ್ನಿವೇಶವನ್ನು ಡೊನಾಲ್ಡ್ ಟ್ರಂಪ್ ತಡೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
“2022ರಲ್ಲಿನ ಕೀವ್ ಸರಕಾರವು ಯಾವುದೇ ಬೆಂಬಲವಿಲ್ಲದೆ ಏಕಾಂಗಿಯಾಗಿತ್ತು ಎಂದು ಶ್ವೇತಭವನದಲ್ಲಿ ಝೆಲೆನ್ಸ್ಕಿ ಹೇಳಿರುವುದು ಅವರ ಎಲ್ಲ ಸುಳ್ಳುಗಳ ಪೈಕಿ ಅತ್ಯಂತ ದೊಡ್ಡ ಸುಳ್ಳಾಗಿದೆ” ಎಂದು ಅವರು ಟೆಲಿಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
“ಆ ಕೊಳಕನನ್ನು ಥಳಿಸುವುದರಿಂದ ಟ್ರಂಪ್ ಹಾಗೂ ವಾನ್ಸ್ ತಡೆದುಕೊಂಡಿದ್ದು ನಿಜಕ್ಕೂ ಪವಾಡವಾಗಿದೆ. ಝೆಲೆನ್ಸ್ಕಿ ತನಗೆ ಉಣಿಸಿದ ಕೈಗಳನ್ನೇ ಕಚ್ಚುತ್ತಿದ್ದಾರೆ” ಎಂದು ಮಾರಿಯಾ ಝಖರೋವಾ ಟೀಕಾಪ್ರಹಾರ ನಡೆಸಿದ್ದಾರೆ. ಝೆಲೆನ್ಸ್ಕಿ ಎಲ್ಲರೊಂದಿಗೂ ಅಹಿತಕರವಾಗಿ ನಡೆದುಕೊಳ್ಳುತ್ತಾರೆ ಎಂದೂ ಅವರು ಆರೋಪಿಸಿದ್ದಾರೆ.
ರಶ್ಯ ಭದ್ರತಾ ಮಂಡಳಿಯ ಉಪಾಧ್ಯಕ್ಷ ಹಾಗೂ ರಶ್ಯದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಅಂತೂ ಝೆಲೆನ್ಸ್ಕಿಯನ್ನು ‘ಅಹಂಕಾರಿ ಹಂದಿ’ ಎಂದು ನೇರವಾಗಿಯೇ ಟೀಕಿಸಿದ್ದಾರೆ. “ಆತನಿಗೆ ಓವಲ್ ಕಚೇರಿಯಲ್ಲಿ ತಕ್ಕ ಶಾಸ್ತಿಯಾಗಿದೆ” ಎಂದೂ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಶ್ವೇತಭವನದಲ್ಲಿ ಡೊನಾಲ್ಡ್ ಟ್ರಂಪ್ ಹಾಗೂ ವೊಲೊಡಿಮಿರ್ ಝೆಲೆನ್ಸ್ಕಿ ನಡುವಿನ ಸಭೆಯಲ್ಲಿ ಡೊನಾಲ್ಡ್ ಟ್ರಂಪ್ ತೆಗೆದುಕೊಂಡ ನಿಲುವಿನ ಬಗ್ಗೆ ರಶ್ಯ ಸರಕಾರಿ ಮಾಧ್ಯಮಗಳೂ ಹರ್ಷ ವ್ಯಕ್ತಪಡಿಸಿವೆ. “ಅಮೆರಿಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ತನ್ನ ಮೇಲೆ ವಾಕ್ ಪ್ರಹಾರ ನಡೆಸುವಾಗ, ಝೆಲೆನ್ಸ್ಕಿ ತಮ್ಮ ಕೈಗಳನ್ನು ತೊಡೆಗಳ ನಡುವೆ ಇಟ್ಟುಕೊಂಡು ಕುಳಿತಿದ್ದರು” ಎಂದು RT ಸುದ್ದಿ ಸಂಸ್ಥೆ ಎಕ್ಸ್ ನಲ್ಲಿ ವ್ಯಂಗ್ಯವಾಗಿ ಪೋಸ್ಟ್ ಮಾಡಿದೆ.
ಈ ನಡುವೆ, ಹಲವು ಯೂರೋಪಿಯನ್ ನಾಯಕರು ಝೆಲೆನ್ಸ್ಕಿ ಬೆಂಬಲಕ್ಕೆ ನಿಂತಿದ್ದರೂ, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ರ ದೀರ್ಘಕಾಲದ ಮಿತ್ರರಾದ ಹಂಗೇರಿಯ ಪ್ರಧಾನಿ ವಿಕ್ಟರ್ ಓರ್ವನ್ ಮಾತ್ರ ಟ್ರಂಪ್ ಪರ ನಿಂತಿದ್ದಾರೆ.







