ಮೆಲಿಸ್ಸಾ ಚಂಡಮಾರುತ : ಹೈಟಿ ಪ್ರವಾಹಕ್ಕೆ 25 ಬಲಿ

PC: x.com/senguptacanada
ಹೈಟಿ: ಮೆಲಿಸ್ಸಾ ಚಂಡಮಾರುತ ಹೈಟಿ ಜನಜೀವನವನ್ನು ಅಕ್ಷರಶಃ ಅಸ್ತವ್ಯಸ್ತಗೊಳಿಸಿದ್ದು, ದೇಶದ ದಕ್ಷಿಣ ಕರಾವಳಿ ಪಟ್ಟಣವಾದ ಪೆಟಿಟ್ ಗೋವ್ ನಲ್ಲಿ ಭಾರೀ ಪ್ರವಾಹಕ್ಕೆ ಕನಿಷ್ಠ 25 ಮಂದಿ ಬಲಿಯಾಗಿದ್ದಾರೆ.
ಲಾ ಡಿಗ್ ನದಿಯ ಪ್ರವಾಹದಿಂದ ಹಲವು ಮನೆಗಳು ಕೊಚ್ಚಿಕೊಂಡು ಹೋಗಿವೆ ಎಂದು ಮೇಯರ್ ಜೀನ್ ಬೆಟ್ರಂಡ್ ಸಬ್ರೀಮ್ ಹೇಳಿದ್ದಾರೆ. ಹಲವು ಮನೆಗಳು ಕುಸಿದಿದ್ದು, ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡು ದುರಂತ ಸಂಭವಿಸಿದೆ ಎಂದು ವಿವರಿಸಿದ್ದಾರೆ.
ಭಾರಿ ಪ್ರವಾಹದಿಂದ ಜನ ಕಂಗೆಟ್ಟಿದ್ದರೆ ಹೈಟಿ ನಾಗರಿಕ ರಕ್ಷಣಾ ಏಜೆನ್ಸಿಯ ಒಬ್ಬ ಅಧಿಕಾರಿ ಮಾತ್ರ ಘಟನಾ ಸ್ಥಳದಲ್ಲಿದ್ದು, ಸಂತ್ರಸ್ತರ ಸ್ಥಳಾಂತರ ಕಾರ್ಯಾಚರಣೆಯಲ್ಲಿದ್ದರು ಎಂದು ಹೇಳಲಾಗಿದೆ.
5ನೇ ವರ್ಗದ ಅಪಾಯಕಾರಿ ಚಂಡಮಾರುತ ಜಮೈಕಾ ಪ್ರದೇಶವನ್ನು ಅಪ್ಪಳಿಸಿದ್ದು, ಗಂಟೆಗೆ 185 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಇದು ಅಟ್ಲಾಂಟಿಕ್ ಪ್ರದೇಶದಲ್ಲಿ ಬೀಸಿದ ಬಲವಾದ ಗಾಳಿಯಾಗಿದೆ. ಚಂಡಮಾರುತ ಕ್ಯೂಬಾದತ್ತ ಮುಖಮಾಡಿದ್ದು, ಇಡೀ ಕೆರೀಬಿಯನ್ ಪ್ರದೇಶದಲ್ಲಿ ವ್ಯಾಪಕ ಹಾನಿಗೆ ಕಾರಣವಾಗಿದೆ.
ಜಮೈಕಾದಲ್ಲಿ ನೂರಾರು ಮನೆಗಳ ಛಾವಣಿಗಳು ಹಾರಿ ಹೋಗಿದ್ದು, 25 ಸಾವಿರಕ್ಕೂ ಮಂದಿ ನಿರ್ಗತಿಕರಾಗಿದ್ದಾರೆ. ತಾತ್ಕಾಲಿಕ ಶಿಬಿರಗಳಿಗೆ ಅವರನ್ನು ಸ್ಥಳಾಂತರಿಸಲಾಗಿದೆ. ದ್ವೀಪರಾಷ್ಟ್ರದ ಶೇಕಡ 77ರಷ್ಟು ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತದಿಂದ ಕಗ್ಗತ್ತಲು ಆವರಿಸಿದೆ ಎಂದು ಶಿಕ್ಷಣ ಸಚಿವ ಡನಾ ಮೋರಿಸ್ ಡಿಕ್ಸನ್ ಹೇಳಿದ್ದಾರೆ.
ಕ್ಯೂಬಾದಲ್ಲಿ ಮನೆಗಳ ಕುಸಿತ, ಪರ್ವತ ಪ್ರದೇಶದ ರಸ್ತೆಗಳು ಮುಚ್ಚಿರುವ ಘಟನೆಗಳು ವರದಿಯಾಗಿದ್ದು, ಹಲವು ಕಡೆಗಳಲ್ಲಿ ಮನೆಗಳ ಛಾವಣಿ ಹಾರಿ ಹೋಗಿದೆ. ನೈರುತ್ಯ ಮತ್ತು ವಾಯುವ್ಯ ಪ್ರದೇಶಗಳಲ್ಲಿ ಭಾರಿ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಪೂರ್ವ ಕ್ಯೂಬಾದಲ್ಲಿ 7.35 ಲಕ್ಷ ಮಂದಿ ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಹೈಟಿ, ಕ್ಯೂಬಾ ಮತ್ತು ಜಮೈಕಾದಲ್ಲಿ ಹಲವು ಮಂದಿ ಮೃತಪಟ್ಟಿದ್ದು, ಪ್ರವಾಹದಿಂದಾಗಿ ಹಲವು ಮಂದಿ ಮನೆಗಳನ್ನು ತೊರೆಯುವಂತಾಗಿದೆ ಎಂದು ವಿವರಿಸಿದ್ದಾರೆ.







