ನನಗೆ 8 ನೊಬೆಲ್ ಪ್ರಶಸ್ತಿ ಸಿಗಬೇಕಿತ್ತು: ಟ್ರಂಪ್ ಪ್ರತಿಪಾದನೆ

ಡೊನಾಲ್ಡ್ ಟ್ರಂಪ್ | Photo Credit : PTI , AP
ವಾಶಿಂಗ್ಟನ್, ಅ.10: ವಾಸ್ತವವಾಗಿ, ನನಗೆ ಕೇವಲ ಒಂದು ಅಲ್ಲ, ಎಂಟು ನೊಬೆಲ್ ಶಾಂತಿ ಪ್ರಶಸ್ತಿಗಳು ಸಿಗಬೇಕಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದು, ತಾವು ಬಗೆಹರಿಸಿದ್ದೇನೆ ಎಂದು ಹೇಳಿಕೊಂಡಿರುವ ಎಂಟು ಸಂಘರ್ಷಗಳ ಪಟ್ಟಿಯನ್ನು ನೀಡಿದ್ದಾರೆ.
ಇದರಲ್ಲಿ ಕಾಂಬೋಡಿಯಾ ಮತ್ತು ಥೈಲ್ಯಾಂಡ್, ಕೊಸೊವೊ ಮತ್ತು ಸೆರ್ಬಿಯಾ, ಪಾಕಿಸ್ತಾನ ಮತ್ತು ಭಾರತ, ಇಸ್ರೇಲ್ ಮತ್ತು ಇರಾನ್ ಹಾಗೂ ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷಗಳು ಸೇರಿವೆ. ಇದರ ಜೊತೆಗೆ, ಇರಾನ್ ಯುದ್ಧ ಮತ್ತು ರಶ್ಯ–ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದ ಮತ್ತೆರಡು ಸಂಘರ್ಷಗಳನ್ನು ಬಗೆಹರಿಸುವ ಹಂತದಲ್ಲಿದ್ದೇನೆ ಎಂದು ಅವರು ಹೇಳಿದರು. ತಾವು ಸಂಘರ್ಷಗಳನ್ನು ಬಗೆಹರಿಸಲು ನೆರವಾದ ದೇಶಗಳ ನಾಯಕರು ನಾರ್ವೆಯ ನೊಬೆಲ್ ಸಮಿತಿಗೆ ಪತ್ರಗಳನ್ನು ಕಳುಹಿಸಿದ್ದಾರೆ ಎಂದೂ ಅಮೆರಿಕ ಅಧ್ಯಕ್ಷರು ಪ್ರತಿಪಾದಿಸಿದರು.
ನವಿ ಪಿಳ್ಳೈ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿರುವುದನ್ನು ಟ್ರಂಪ್ ಟೀಕಿಸಿದ್ದು, ‘ನವಿ ಪಿಳ್ಳೈ ಯಾರೆಂದು ಕೆಲವೇ ಜನರಿಗೆ ತಿಳಿದಿದೆ. ಅವರು ಇಸ್ರೇಲ್ ವಿರುದ್ಧ ವೈರತ್ವ ಹೊಂದಿದ್ದಾರೆ’ ಎಂದು ಆರೋಪಿಸಿದ್ದಾರೆ.
‘ನಿಮ್ಮ ಅಧ್ಯಕ್ಷನಾಗಿ ನನ್ನಿಂದ ಪ್ರತಿನಿಧಿಸಲ್ಪಟ್ಟ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಬೇಕಿತ್ತು, ಆದರೆ ಸಿಗಲಿಲ್ಲ. ಈ ನಿರ್ಧಾರವು ನಾರ್ವೆಗೆ ಅಂಟಿಕೊಂಡ ಅಳಿಸಲಾಗದ ಕಳಂಕವಾಗಿದೆ. ನೊಬೆಲ್ ಶಾಂತಿ ಪ್ರಶಸ್ತಿಯು ಪ್ರಜಾಪ್ರಭುತ್ವ ವಿರೋಧಿಗಳು ಮತ್ತು ನಾಗರಿಕತೆಯ ಶತ್ರುಗಳಾಗಿರುವ ಕೆಲವು ಉಗ್ರಗಾಮಿ ಸಿದ್ಧಾಂತಿಗಳಿಂದಾಗಿ ಶಾಶ್ವತವಾಗಿ ಮೌಲ್ಯ ಕಳೆದುಕೊಂಡಿದೆ’ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ.
ದಕ್ಷಿಣ ಆಫ್ರಿಕಾದ ನ್ಯಾಯಶಾಸ್ತ್ರಜ್ಞೆ ಮತ್ತು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಾಜಿ ಮುಖ್ಯಸ್ಥೆಯಾಗಿರುವ ನವಿ ಪಿಳ್ಳೈ ಅವರು, ಗಾಝಾದಲ್ಲಿ ಇಸ್ರೇಲ್ ಜನಾಂಗೀಯ ಹತ್ಯೆ ನಡೆಸಿದೆ ಎಂದು ತೀರ್ಮಾನಿಸಿದ ವಿಶ್ವಸಂಸ್ಥೆಯ ಆಯೋಗದ ಅಧ್ಯಕ್ಷತೆ ವಹಿಸಿದ್ದರು. ಆದರೆ, ಈ ತೀರ್ಮಾನವನ್ನು ಇಸ್ರೇಲ್ ತಿರಸ್ಕರಿಸಿದೆ.






