ತಪಾಸಣೆಗೆ ಅನುವು ಮಾಡಿಕೊಡಲು ತುರ್ತು ಕ್ರಮ: ಇರಾನ್ ಗೆ IAEA ಆಗ್ರಹ

Photo Credit : PTI
ವಿಯೆನ್ನಾ, ನ.13: ಇರಾನ್ ನ ಪ್ರಮುಖ ಪರಮಾಣು ಸ್ಥಾವರಗಳಿಗೆ ತಪಾಸಣಾಧಿಕಾರಿಗಳು ಮರಳಲು ಅವಕಾಶ ನೀಡುವ ನಿಟ್ಟಿನಲ್ಲಿ ಹಂತ ಹಂತದ ಕ್ರಮಗಳನ್ನು ಕೈಗೊಳ್ಳುವಂತೆ ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆ (IAEA) ಇರಾನ್ ಅನ್ನು ಒತ್ತಾಯಿಸಿದೆ. ಇಂತಹ ಪ್ರವೇಶವು ಅತ್ಯಂತ ನಿರ್ಣಾಯಕ ಎಂದು ಅದು ಹೇಳಿದೆ.
ಯಾವುದೇ ವಿಳಂಬವಿಲ್ಲದೆ ಇರಾನ್ ನಲ್ಲಿ ಪರಿಶೀಲನಾ ಚಟುವಟಿಕೆಗಳನ್ನು ನಡೆಸುವುದು ಅತ್ಯಂತ ನಿರ್ಣಾಯಕವಾಗಿದೆ ಎಂದು ಮುಂದಿನ ವಾರ ನಡೆಯಲಿರುವ IAEA ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಹಂತ ಹಂತದ ಕ್ರಮಗಳು ಇರಾನ್ ನಲ್ಲಿ ಸಾಮಾನ್ಯ ಸುರಕ್ಷತಾ ಕ್ರಮಗಳ ಜಾರಿಗೆ ದಾರಿ ಮಾಡಿಕೊಡುವುದಲ್ಲದೆ, ವಿಸ್ತೃತ ಒಪ್ಪಂದಕ್ಕೆ ಪೂರಕವಾದ ವಿಶ್ವಾಸ ವೃದ್ಧಿಸುವ ವಾತಾವರಣವನ್ನು ನಿರ್ಮಿಸಲು ಸಹಾಯ ಮಾಡುತ್ತವೆ. ಪರಮಾಣು ವಸ್ತುಗಳ ಕುರಿತಾದ ಮಾಹಿತಿಯ ಕೊರತೆ ಮತ್ತು ಅವುಗಳನ್ನು ಪರಿಶೀಲಿಸಲು ಸ್ಥಾವರಗಳಿಗೆ ಪ್ರವೇಶವಿಲ್ಲದಿರುವುದು ಪರಮಾಣು ಪ್ರಸರಣದ ಗಂಭೀರ ಕಳವಳಕಾರಿ ವಿಷಯವಾಗಿದ್ದು, ಇದನ್ನು ಅತ್ಯಂತ ತುರ್ತಾಗಿ ಸರಿಪಡಿಸಬೇಕಾಗಿದೆ ಎಂದು IAEA ತಿಳಿಸಿದೆ.
ಜೂ. 2025ರಲ್ಲಿ ಅಮೆರಿಕದ ಬೆಂಬಲದೊಂದಿಗೆ ಇಸ್ರೇಲ್ ಇರಾನ್ ನ ಪರಮಾಣು ನೆಲೆಗಳ ಮೇಲೆ 12 ದಿನಗಳ ಕಾಲ ನಡೆಸಿದ ದಾಳಿಯ ನಂತರ, IAEAಗೆ ದಾಳಿಗೊಳಗಾದ ಪ್ರಮುಖ ಪರಮಾಣು ಸ್ಥಾವರಗಳಿಗೆ ಪ್ರವೇಶ ಸಿಕ್ಕಿಲ್ಲ. ಆದರೆ, ಸೆಪ್ಟೆಂಬರ್ 2026ರಲ್ಲಿ ಇರಾನ್ ನ ಬುಶೆಹರ್ ಪರಮಾಣು ವಿದ್ಯುತ್ ಸ್ಥಾವರಕ್ಕೆ ಸಂಸ್ಥೆಯ ತಪಾಸಣಾಧಿಕಾರಿಗಳು ಭೇಟಿ ನೀಡಿದ್ದರು. ದಾಳಿಯ ಬಳಿಕ ನಡೆದ ಏಕೈಕ ತಪಾಸಣೆ ಇದಾಗಿದೆ. ಇತರ ಪ್ರಮುಖ ಸ್ಥಾವರಗಳ ಪರಿಶೀಲನೆಗೆ ಅವಕಾಶ ನೀಡುವಂತೆ IAEA ಪದೇ ಪದೇ ಒತ್ತಾಯಿಸುತ್ತಿದೆ.
ಜೂನ್ 2025ರ ದಾಳಿಗೂ ಮುನ್ನ, ಇರಾನ್ ಸುಮಾರು 440.9 ಕಿಲೋಗ್ರಾಂಗಳಷ್ಟು ಶೇ. 60ರಷ್ಟು ಶುದ್ಧೀಕರಿಸಿದ ಯುರೇನಿಯಂ ಹೊಂದಿತ್ತು ಎಂದು IAEA ಲೆಕ್ಕಹಾಕಿತ್ತು. ಇದು ಪರಮಾಣು ಶಸ್ತ್ರಾಸ್ತ್ರ ತಯಾರಿಕೆಗೆ ಸಾಮಾನ್ಯವಾಗಿ ಅಗತ್ಯವೆಂದು ಪರಿಗಣಿಸಲಾಗುವ ಶೇ. 90ರಷ್ಟು ಸಂವರ್ಧನೆಯ ಮಟ್ಟಕ್ಕಿಂತ ಕಡಿಮೆಯಿದ್ದರೂ, 2015ರ ಪರಮಾಣು ಒಪ್ಪಂದದಲ್ಲಿ ನಿಗದಿಪಡಿಸಲಾಗಿದ್ದ ಶೇ. 3.67ರ ಮಿತಿಗಿಂತ ತೀರಾ ಹೆಚ್ಚಾಗಿದೆ.






