ಐಸಿಸಿ ದ್ವಿಮುಖ ನೀತಿ ಆರೋಪ: ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ವಿಶೇಷ ಸೌಲಭ್ಯ ಕಲ್ಪಿಸಿದ್ದನ್ನು ಪ್ರಶ್ನಿಸಿದ ಬಾಂಗ್ಲಾದೇಶ

PC: x.com/PKohliReturns
ಹೊಸದಿಲ್ಲಿ: ಟಿ20 ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ಪಂದ್ಯಗಳನ್ನು ಭಾರತದಿಂದ ಹೊರತಾದ ಕ್ರೀಡಾಂಗಣಗಳಿಗೆ ಸ್ಥಳಾಂತರಿಸಬೇಕು ಎಂಬ ಮನವಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿದ ಬೆನ್ನಲ್ಲೇ, ಐಸಿಸಿ ದ್ವಿಮುಖ ನೀತಿ ಅನುಸರಿಸುತ್ತಿದೆ ಎಂಬ ಗಂಭೀರ ಆರೋಪವನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮಾಡಿದೆ. 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಆಡಿದ ಪಂದ್ಯಗಳನ್ನು ತಟಸ್ಥ ಸ್ಥಳಗಳಿಗೆ ವರ್ಗಾಯಿಸಿದ್ದ ಕ್ರಮವನ್ನು ಬಿಸಿಬಿ ಪ್ರಶ್ನಿಸಿದೆ.
"ಐಸಿಸಿ ಈ ಹಿಂದೆ ಸ್ಥಿತಿಸ್ಥಾಪಕತೆಯನ್ನು ಪ್ರದರ್ಶಿಸಿತ್ತು. ಆದರೆ ಅದೇ ಆಯ್ಕೆಯನ್ನು ಬಾಂಗ್ಲಾದೇಶಕ್ಕೆ ವಿಸ್ತರಿಸಲು ನಿರಾಕರಿಸಿದೆ" ಎಂದು ಢಾಕಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಸಿಬಿ ಅಧ್ಯಕ್ಷ ಅಮಿನುಲ್ ಇಸ್ಲಾಮ್ ಹೇಳಿದರು. ಬಾಂಗ್ಲಾದೇಶದ ಕ್ರಿಕೆಟ್ ಸಲಹೆಗಾರ ಆಸೀಫ್ ನಝ್ರುಲ್, ಬಿಸಿಬಿ ಅಧಿಕಾರಿಗಳು ಹಾಗೂ ರಾಷ್ಟ್ರೀಯ ತಂಡದ ಆಟಗಾರರನ್ನು ಭೇಟಿ ಮಾಡಿ ಚರ್ಚಿಸಿದ ಬಳಿಕ ಇಸ್ಲಾಮ್ ಈ ಹೇಳಿಕೆ ನೀಡಿದ್ದಾರೆ.
ಟಿ20 ವಿಶ್ವಕಪ್ ಪಂದ್ಯಗಳಿಗಾಗಿ ಬಾಂಗ್ಲಾದೇಶ ತಂಡ ಭಾರತಕ್ಕೆ ಪ್ರಯಾಣಿಸದಿರಲು ಬಿಸಿಬಿ ನಿರ್ಧರಿಸಿದೆ ಎಂದು ಅವರು ತಿಳಿಸಿದರು.
2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತಕ್ಕೆ ವಿಶೇಷ ಸೌಲಭ್ಯ ನೀಡಿ ದುಬೈನಲ್ಲಿ ಪಂದ್ಯಗಳನ್ನು ಆಡಲು ಅವಕಾಶ ನೀಡಲಾಗಿತ್ತು ಎಂದು ಅಮಿನುಲ್ ಇಸ್ಲಾಮ್ ಹೇಳಿದರು. "ಕಳೆದ ಫೆಬ್ರುವರಿಯಲ್ಲಿ ಚಾಂಪಿಯನ್ಸ್ ಟ್ರೋಫಿಗಾಗಿ ಒಂದು ತಂಡ ಮತ್ತೊಂದು ದೇಶಕ್ಕೆ ಪ್ರಯಾಣಿಸಲು ನಿರಾಕರಿಸಿದಾಗ, ಐಸಿಸಿ ಆ ತಂಡಕ್ಕಾಗಿ ತಟಸ್ಥ ತಾಣವನ್ನು ಆಯೋಜಿಸಿತ್ತು. ಆ ತಂಡ ತನ್ನ ಎಲ್ಲ ಪಂದ್ಯಗಳನ್ನು ಒಂದೇ ತಟಸ್ಥ ಸ್ಥಳದಲ್ಲಿ ಆಡಿದ್ದು, ಒಂದೇ ಮೈದಾನದಲ್ಲಿ ಪಂದ್ಯಗಳನ್ನು ನಡೆಸಿ, ಒಂದೇ ಹೋಟೆಲ್ನಲ್ಲಿ ವಾಸ್ತವ್ಯ ಹೂಡಿತ್ತು. ಇದು ಆ ತಂಡಕ್ಕೆ ನೀಡಲಾದ ವಿಶೇಷ ಸೌಲಭ್ಯ" ಎಂದು ಇಸ್ಲಾಮ್ ಹೇಳಿದ್ದಾಗಿ ಇಎಸ್ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ.
ಭಾರತ ಮತ್ತು ಶ್ರೀಲಂಕಾ ಸಂಯುಕ್ತ ಆತಿಥ್ಯದಲ್ಲಿ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರುವರಿ 7ರಿಂದ ಆರಂಭವಾಗಲಿದೆ.







