ಗಾಝಾ ಗಡಿಯಲ್ಲಿ ಇಸ್ರೇಲಿ ಸಮುದಾಯದ ಮೇಲೆಯೇ ಬಾಂಬ್ ಹಾಕಿದ ಐಡಿಎಫ್ ಯುದ್ಧವಿಮಾನ!
ತಾಂತ್ರಿಕ ದೋಷ ಎಂದು ಸ್ಪಷ್ಟನೆ ನೀಡಿದ ಇಸ್ರೇಲ್ ಸೇನೆ

PC : NDTV
ಜೆರುಸಲೇಂ: ದಕ್ಷಿಣ ಗಾಝಾ ಗಡಿಯಲ್ಲಿ ಇಸ್ರೇಲ್ ಸಮುದಾಯದವರು ವಾಸಿಸುತ್ತಿರುವ ನಿರ್ ಇಝಾಕ್ ಪ್ರದೇಶದ ಮೇಲೆಯೇ ಇಸ್ರೇಲ್ ವಾಯುಪಡೆಯ ಯುದ್ಧವಿಮಾನ ಬುಧವಾರ ಬಾಂಬ್ ಹಾಕಿರುವುದಾಗಿ ವರದಿಯಾಗಿದೆ.
ಗಾಝಾ ಪಟ್ಟಿಯಲ್ಲಿ ಕಾರ್ಯಾಚರಣೆಗೆ ತೆರಳುತ್ತಿದ್ದ ಇಸ್ರೇಲ್ ಭದ್ರತಾ ಪಡೆ(ಐಡಿಎಫ್) ಯುದ್ಧವಿಮಾನ ತಾಂತ್ರಿಕ ದೋಷದಿಂದಾಗಿ ಗಾಝಾ ಗಡಿಯಿಂದ 2 ಕಿ.ಮೀ ದೂರವಿರುವ ನಿರ್ ಇಝಾಕ್ ಪ್ರದೇಶದ ಮೇಲೆ ಬಾಂಬ್ ಹಾಕಿದೆ. ಅದೃಷ್ಟವಶಾತ್ ಬಯಲು ಪ್ರದೇಶಕ್ಕೆ ಬಾಂಬ್ ಅಪ್ಪಳಿಸಿದ ಕಾರಣ ಯಾವುದೇ ಸಾವು-ನೋವು ವರದಿಯಾಗಿಲ್ಲ ಎಂದು ಇಸ್ರೇಲ್ ಸೇನೆ ಹೇಳಿದೆ.
ಎರಡು ತಿಂಗಳ ಕದನ ವಿರಾಮವನ್ನು ಕೊನೆಗೊಳಿಸಿದ್ದ ಇಸ್ರೇಲ್ ಮಿಲಿಟರಿ ಮಾರ್ಚ್ 18ರಿಂದ ಗಾಝಾದಲ್ಲಿ ಮಿಲಿಟರಿ ಕಾರ್ಯಾಚರಣೆ ಪುನರಾರಂಭಿಸಿದೆ.
ಈ ಮಧ್ಯೆ, ಗಾಝಾ ಪಟ್ಟಿಯ ಮೇಲಿನ ದಾಳಿಯನ್ನು ಇಸ್ರೇಲ್ ಮಿಲಿಟರಿ ಮುಂದುವರಿಸಿದ್ದು ಖಾನ್ ಯೂನಿಸ್ ನಗರದ ಮವಾಸಿ ಪ್ರದೇಶದಲ್ಲಿನ ಆಸ್ಪತ್ರೆಯ ಆವರಣಕ್ಕೆ ಬುಧವಾರ ನಡೆದ ವೈಮಾನಿಕ ದಾಳಿಯಲ್ಲಿ ಒಬ್ಬ ವೈದ್ಯಕೀಯ ಸಿಬ್ಬಂದಿ ಮೃತಪಟ್ಟಿದ್ದು ಇತರ 9 ಮಂದಿ ಗಾಯಗೊಂಡಿರುವುದಾಗಿ ಗಾಝಾದ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಿಖರ ಮಾಹಿತಿಯ ಹಿನ್ನೆಲೆಯಲ್ಲಿ, ಆಸ್ಪತ್ರೆಯ ಆವರಣದಲ್ಲಿ ಕಾರ್ಯಾಚರಿಸುತ್ತಿದ್ದ ಹಮಾಸ್ ದಳದ ಮುಖ್ಯಸ್ಥ ಹಾಗೂ ಕಮಾಂಡರ್ ರನ್ನು ಗುರಿಯಾಗಿಸಿ ದಾಳಿ ನಡೆಸಿರುವುದಾಗಿ ಇಸ್ರೇಲಿ ಮಿಲಿಟರಿಯ ವಕ್ತಾರರನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.







