ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡದಿದ್ದರೆ ಅದು ದೇಶಕ್ಕೆ ಅವಮಾನ: ಟ್ರಂಪ್

PC: x.com/thehill
ವಾಷಿಂಗ್ಟನ್: ಕನಿಷ್ಠ ಏಳು ಅಂತರರಾಷ್ಟ್ರೀಯ ಸಂಘರ್ಷಗಳನ್ನು ಕೊನೆಗೊಳಿಸಿದ್ದಾಗಿ ಹೇಳಿಕೊಂಡಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡದಿದ್ದರೆ ಅದು ದೇಶಕ್ಕೆ ಅವಮಾನ" ಎಂದು ಮಂಗಳವಾರ ಹೇಳಿದ್ದಾರೆ.
ಗಾಝಾ ಶಾಂತಿ ಯೋಜನೆಯನ್ನು ಘೋಷಿಸಿದ ಮರುದಿನವೇ ನೊಬೆಲ್ ಪ್ರಶಸ್ತಿ ಬಗ್ಗೆ ಟ್ರಂಪ್ ಮತ್ತೆ ಹೇಳಿಕೆ ನೀಡಿದ್ದಾರೆ. ಹಮಾಸ್ ಒಪ್ಪಿಕೊಂಡರೆ ಇದು ತಾವು ಮಧ್ಯಸ್ಥಿಕೆ ವಹಿಸಿದ ಎಂಟನೇ ಶಾಂತಿ ಒಪ್ಪಂದ ಎಂದು ಹೇಳಿಕೊಂಡಿದ್ದಾರೆ.
ಅಮೆರಿಕದ ಅಗ್ರಗಣ್ಯ ಸೇನಾ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್, "ನಿಮಗೆ ನೊಬೆಲ್ ಪ್ರಶಸ್ತಿ ಸಿಗುತ್ತದೆಯೇ? ಖಂಡಿತಾ ಇಲ್ಲ. ಕೆಡುಕು ಮಾಡುವ ವ್ಯಕ್ತಿಗೆ ಅವರು ಅದನ್ನು ನೀಡುತ್ತಾರೆ" ಎಂದು ಹೇಳಿದರು.
"ಇದು ನಮ್ಮ ದೇಶಕ್ಕೆ ದೊಡ್ಡ ಅವಮಾನ ಎಂದು ನಾನು ಹೇಳಬಲ್ಲೆ. ನನಗೆ ಅದು ಬೇಕಿಲ್ಲ. ಅದರೆ ಅದು ದೇಶಕ್ಕೆ ಸಿಗಬೇಕು ಎನ್ನುವುದು ನನ್ನ ಬಯಕೆ. ಏಕೆಂದರೆ ಅ ರೀತಿಯದ್ದು ದೇಶಕ್ಕೆ ಎಂದೂ ಸಿಕ್ಕಿಲ್ಲ" ಎಂದು ಸ್ಪಷ್ಟಪಡಿಸಿದರು.
ಅಕ್ಟೋಬರ್ 10ರಂದು ನೊಬೆಲ್ ಪ್ರಶಸ್ತಿಗಳು ಘೋಷಣೆಯಾಗುವ ಹಿನ್ನೆಲೆಯಲ್ಲಿ ಟ್ರಂಪ್ ಹೇಳಿಕೆ ವಿಶೇಷ ಮಹತ್ವ ಪಡೆದಿದೆ.





