ಬ್ರಿಟನ್ ಗೃಹ ಇಲಾಖೆಯಿಂದ ವಲಸಿಗರ ಕಡೆಗಣನೆ: ವರದಿ

Photo: wikipedia
ಲಂಡನ್: ಬ್ರಿಟನ್ ನ ಗ್ರಹ ಇಲಾಖೆಯು ಆಶ್ರಯ ಕೋರಿ ಬರುವ ವಲಸಿಗರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುತ್ತಿದ್ದು 55 ಮಂದಿಯನ್ನು ಈ ಹಿಂದಿನ ಆನಾಥಾಶ್ರಮದಲ್ಲಿ ಕೂಡಿಹಾಕಿದ್ದು ಇವರಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಚಾರಿಟಿ ಸಂಸ್ಥೆಗಳು ಆರೋಪಿಸಿವೆ.
ತೀವ್ರ ಅಂಗವೈಕಲ್ಯದಿಂದ ಬಳಲುತ್ತಿರುವ ಮತ್ತು ಅಸ್ವಸ್ಥರಾಗಿರುವ ಸುಮಾರು 55 ವಲಸಿಗರು ಎಸೆಕ್ಸ್ ಕೌಂಟಿಯಲ್ಲಿ ಈ ಹಿಂದೆ ಅನಾಥಾಶ್ರಮ ಆಗಿದ್ದ ಕಟ್ಟಡದಲ್ಲಿ ಬದುಕಲು ಅತ್ಯಂತ ಕಷ್ಟವಾಗಿರುವ ಪರಿಸ್ಥಿತಿಯಲ್ಲಿದ್ದಾರೆ. ಸರಣಿ ಹೃದಯಾಘಾತದಿಂದ ನಡೆದಾಡಲು ಕಷ್ಟದ ಪರಿಸ್ಥಿತಿಯಲ್ಲಿರುವ ಇರಾನ್ ನ ವಲಸಿಗನಿಗೆ ಗಾಲಿಕುರ್ಚಿಯ ಅಗತ್ಯವಿದೆ ಎಂದು ವೈದ್ಯರು ಶಿಫಾರಸು ಮಾಡಿದ್ದರೂ ಇದನ್ನು ಅಧಿಕಾರಿಗಳು ಪರಿಗಣಿಸಲಿಲ್ಲ. ಈತ ಜೂನ್ 18ರಂದು ಮತ್ತೊಮ್ಮೆ ಹೃದಯಾಘಾತವಾಗಿ ಮೃತಪಟ್ಟಿದ್ದಾನೆ. ಈ ವಲಸಿಗರನ್ನು ಕೂಡಿಹಾಕಿರುವ ಕಟ್ಟಡದಲ್ಲಿ ಭದ್ರತಾ ಸಿಬಂದಿ, ಸ್ವಾಗತ ಸಿಬಂದಿ ಮುಂತಾದವರಿದ್ದಾರೆ. ಆದರೆ ತರಬೇತಿ ಪಡೆದ ಆರೈಕೆ ಕೆಲಸಗಾರರು ಮತ್ತು ದಾದಿಯ ಕೊರತೆಯಿದೆ. ಈ ಬಗ್ಗೆ ಹಲವು ಬಾರಿ ವರದಿ ಮಾಡಿದರೂ ಯಾವುದೇ ಸ್ಪಂದನೆ ದೊರಕಿಲ್ಲ ಎಂದು `ದಿ ಗಾರ್ಡಿಯನ್' ವರದಿ ಮಾಡಿದೆ.
ಇಲ್ಲಿರುವ ಎಲ್ಲರೂ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಹಿಂದೆ ಆರೈಕೆ ಮನೆಯಾಗಿದ್ದ ಇಲ್ಲಿ ಈಗ ಆರೈಕೆ ಮಾಡಲು ಯಾರೂ ಇಲ್ಲ. ನಾವು ಯಾವಾಗ ಬೇಕಾದರೂ ಇಲ್ಲಿಗೆ ಬರಬಹುದು, ಅಥವಾ ಇಲ್ಲಿಂದ ತೆರಳಬಹುದು. ಆದರೆ ಇದೊಂದು ಮುಕ್ತ ಜೈಲಿನಂತೆ ಭಾಸವಾಗುತ್ತಿದೆ. ನಮ್ಮನ್ನು ಇಲ್ಲಿ ಕೂಡಿ ಹಾಕಿ ಕೈಬಿಡಲಾಗಿದೆ' ಎಂದು ಇಲ್ಲಿ ನೆಲೆಸಿರುವ ವಲಸಿಗರು ಹೇಳಿದ್ದಾರೆ.ಅಫ್ಘಾನ್, ಸುಡಾನ್ ಮತ್ತಿತರ ಯುದ್ಧಗ್ರಸ್ತ ಪ್ರದೇಶದಿಂದ ಓಡಿ ಬಂದಿರುವ ಹೆಚ್ಚಿನವರನ್ನು ಇಲ್ಲಿ ಕೂಡಿಹಾಕಲಾಗಿದೆ. .
ಅಂಗವೈಕಲ್ಯ, ದೃಷ್ಟಿಹೀನತೆ, ಚಲನವಲನದ ಸಮಸ್ಯೆ ಇರುವ ಸುಮಾರು ಸುಮಾರು 77 ವಲಸಿಗರು ನೆಲೆಸಿದ್ದರು. ಆದರೆ ಇವರಿಗೆ ಅಗತ್ಯವಿರುವ ಗಾಲಿಕುರ್ಚಿಯ ಕೊರತೆಯಿತ್ತು. ಇಲ್ಲಿರುವ ವಲಸಿಗರಿಗೆ `ದಿ ಚಾರಿಟಿ ರೆಪ್ಯುಜೀ, ಅಸಿಲಿಯಂ ಸೀಕರ್ ಆ್ಯಂಡ್ ಮೈಗ್ರೆಂಟ್ ಆ್ಯಕ್ಷನ್' ಎಂಬ ಸಂಸ್ಥೆ ನೆರವಾಗುತ್ತಿತ್ತು. ಆದರೆ ನಿಧಿಯ ಕೊರತೆಯಿಂದ ಅತ್ಯಗತ್ಯವಿರುವ ಗಾಲಿ ಕುರ್ಚಿ ಮತ್ತಿತರ ವ್ಯವಸ್ಥೆಗಳನ್ನು ಒದಗಿಸಲಾಗುತ್ತಿಲ್ಲ. ಈ ದುರ್ಬಲ ಜನರನ್ನು ಹೀಗೆ ನಡುರಸ್ತೆಯಲ್ಲಿ ಕೈಬಿಡುವುದು ಅತ್ಯಂತ ಕ್ರೌರ್ಯವಾಗಿದೆ. ಇವರು ಬವಣೆ ಪಡುತ್ತಿರುವುದನ್ನು ಅಸಹಾಯಕರಾಗಿ ನೋಡುವ ಪರಿಸ್ಥಿತಿ ನಮ್ಮದಾಗಿದೆ' ಎಂದು ಚಾರಿಟಿಯ ಕಾರ್ಯಾಚರಣೆ ವಿಭಾಗದ ಮುಖ್ಯಸ್ಥೆ ಮಾರಿಯಾ ವಿಲ್ಬಿ ಹೇಳಿದ್ದಾರೆ.
ನವೆಂಬರ್ನಲ್ಲಿ ಈ ವ್ಯವಸ್ಥೆಯನ್ನು ಆರಂಭಿಸಿದ ಬಳಿಕ ಇಲ್ಲಿರುವ ಅವ್ಯವಸ್ಥೆಗಳ ಬಗ್ಗೆ ಗೃಹ ಇಲಾಖೆಗೆ ಹಲವು ಬಾರಿ ಮನವರಿಕೆ ಮಾಡಲಾಗಿದೆ. ಆಶ್ರಯ ಕೋರಿ ಬಂದವರಿಗೆ ಇದು ಸೂಕ್ತ ಜಾಗವಲ್ಲ ಎಂದು ಸ್ಥಳೀಯ ಆಡಳಿತ ಸಮಿತಿ ಕಳವಳ ವ್ಯಕ್ತಪಡಿಸಿದೆ. `ಹೆಚ್ಚುವರಿ ಆರೈಕೆಯ ಅಗತ್ಯಗಳಿಗಾಗಿ ಇಲ್ಲಿ ಇರಿಸಲಾಗಿರುವ ಜನರು ದುರ್ಬಲರಾಗಿದ್ದಾರೆ ಮತ್ತು ಅವರಿಗೆ ನಮ್ಮ ಮಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಆರೈಕೆಯ ವ್ಯವಸ್ಥೆ ಮಾಡಲಾಗಿದೆ' ಎಂದು ಸಮಿತಿಯ ವಕ್ತಾರರು ಹೇಳಿದ್ದಾರೆ.
ಆಶ್ರಯ ಕೋರಿ ಬರುವವರ ಸುರಕ್ಷೆ ಮತ್ತು ಯೋಗಕ್ಷೇಮವನ್ನು ಖಾತರಿಪಡಿಸಲು ತಾವು ಬದ್ಧವಾಗಿದ್ದೇವೆ. ಆದರೆ ತಾವು ಆರೈಕೆ ಮನೆಯನ್ನು ನಿರ್ವಹಿಸುತ್ತಿಲ್ಲ. ಅಂಗವೈಕಲ್ಯ ಹೊಂದಿದವರು ವಸತಿ ಸೌಕರ್ಯಕ್ಕೆ ಪ್ರವೇಶ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಆಶ್ರಯ ಪೂರೈಕೆದಾರರು ಒಪ್ಪಂದದ ಪ್ರಕಾರ ಬದ್ಧವಾಗಿದ್ದಾರೆ. ಈ ವಿಷಯದಲ್ಲಿ ಯಾವುದಾದರೂ ಸಮಸ್ಯೆ ಎದುರಾದರೆ ಗೃಹ ಇಲಾಖೆ ಆಶ್ರಯ ಪೂರೈಕೆದಾರರನ್ನು ಸಂಪರ್ಕಿಸುತ್ತದೆ ಎಂದು ವಕ್ತಾರರು ಹೇಳಿದ್ದಾರೆ.
ಇಲ್ಲಿರುವ ವಲಸಿಗರನ್ನು ನೋಡಿಕೊಳ್ಳುವ ರೀತಿ ಕ್ಷಮೆಗೆ ಅರ್ಹವಲ್ಲ. ತನ್ನ 40 ವರ್ಷಗಳ ವೃತ್ತಿಜೀವನದಲ್ಲೇ ಇಲ್ಲಿರುವಷ್ಟು ಕೆಟ್ಟ ವ್ಯವಸ್ಥೆಯನ್ನು ನೋಡಿಲ್ಲ ಎಂದು ಬ್ರಿಟನ್ನ ರಾಷ್ಟ್ರೀಯ ಆರೋಗ್ಯ ಸೇವಾ ಇಲಾಖೆಯ ನಿವೃತ್ತ ಅಧಿಕಾರಿ ಹೇಳಿದ್ದಾರೆ.







