ಯಶಸ್ಸಿಗೆ ಐಐಟಿ ಮಾತ್ರ ದಾರಿಯಲ್ಲ; ಜಾಗತಿಕ AI ಲೋಕ ಆಳುತ್ತಿರುವ ಭಾರತೀಯರಿಗೆ ʼTIMEʼ ಮನ್ನಣೆ

Image: LinkedIn/@Rahul Patil, @Vijaye Raji)
ಟೈಮ್ ಪಟ್ಟಿಯಲ್ಲಿ ಹೆಸರುಪಡೆದಿರುವ OpenAI ನಲ್ಲಿ ಅಪ್ಲಿಕೇಶನ್ಗಳ ಸಿಟಿಒ ಆಗಿರುವ ವಿಜಯ್ ರಾಜಿ ಮತ್ತು Anthropic ನ ಸಿಟಿಒ ಆಗಿ ಸೇವೆ ಸಲ್ಲಿಸುತ್ತಿರುವ ರಾಹುಲ್ ಪಾಟೀಲ್ ಅವರು ಐಐಟಿಯಲ್ಲಿ ಓದಿದವರಲ್ಲ. ಹಾಗಿದ್ದೂ ಜಾಗತಿಕ AI ಉದ್ಯಮವನ್ನು ರೂಪಿಸುವ ಕಂಪನಿಗಳಲ್ಲಿ ಹಿರಿಯ ನಾಯಕತ್ವದ ಪಾತ್ರಗಳಲ್ಲಿದ್ದಾರೆ.
ಐಐಟಿ ಪದವಿಯು ಅತ್ಯಂತ ಬೇಡಿಕೆಯ ಕೆಲವು ವೃತ್ತಿಜೀವನಕ್ಕೆ ಬಾಗಿಲು ತೆರೆದಿರುವುದು ನಿಜ. ಆದರೆ ತಂತ್ರಜ್ಞಾನ ಕ್ಷೇತ್ರದಲ್ಲಿರುವ ಕೆಲವು ಅತಿದೊಡ್ಡ ಹೆಸರುಗಳು ವಿಭಿನ್ನ ಮಾರ್ಗವನ್ನು ಅನುಸರಿಸಿವೆ. ವಿಜಯೆ ರಾಜಿ ಮತ್ತು ರಾಹುಲ್ ಪಾಟೀಲ್ ಐಐಟಿಯಲ್ಲಿ ಅಧ್ಯಯನ ಮಾಡಿಲ್ಲ. ಆದರೂ ಅವರ ವೃತ್ತಿಜೀವನವು ಅವರನ್ನು ಎಐ ಉದ್ಯಮದ ಹೃದಯಭಾಗಕ್ಕೆ ಕೊಂಡೊಯ್ದಿದೆ.
ಟೈಮ್ ಮ್ಯಾಗಝಿನ್ ಇತ್ತೀಚೆಗೆ ‘ಎಕ್ಸಿಕ್ಯೂಟಿವ್ಸ್ ಆಫ್ ದಿ ಇಯರ್: ಟೆಕ್ & ಡೇಟಾ’ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಭವಿಷ್ಯ ರೂಪಿಸುವ 50 ನಾಯಕರನ್ನು ಗುರುತಿಸಿದೆ. ಈ ಪಟ್ಟಿಯಲ್ಲಿ ಹೆಸರುಪಡೆದಿರುವ OpenAI ನಲ್ಲಿ ಅಪ್ಲಿಕೇಶನ್ಗಳ ಸಿಟಿಒ ಆಗಿರುವ ವಿಜಯ್ ರಾಜಿ ಮತ್ತು Anthropic ನ ಸಿಟಿಒ ಆಗಿ ಸೇವೆ ಸಲ್ಲಿಸುತ್ತಿರುವ ರಾಹುಲ್ ಪಾಟೀಲ್ ಅವರು ಐಐಟಿಯಲ್ಲಿ ಓದಿದವರಲ್ಲ. ಹಾಗಿದ್ದೂ ಜಾಗತಿಕ AI ಉದ್ಯಮವನ್ನು ರೂಪಿಸುವ ಕಂಪನಿಗಳಲ್ಲಿ ಹಿರಿಯ ನಾಯಕತ್ವದ ಪಾತ್ರಗಳಲ್ಲಿದ್ದಾರೆ.
ವಿಜಯ್ ರಾಜಿ ಪ್ರಸ್ತುತ OpenAI ನಲ್ಲಿ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. OpenAI ಅವರ ಸಾಫ್ಟ್ವೇರ್ ಕಂಪನಿಯಾದ ಸ್ಟ್ಯಾಟ್ಸಿಗ್ ಅನ್ನು ಸ್ವಾಧೀನಪಡಿಸಿಕೊಂಡ ನಂತರ ಅವರು ಸೆಪ್ಟೆಂಬರ್ 2025ರಲ್ಲಿ ಈ ಹುದ್ದೆಗೆ ಬಂದರು. ಪಾಂಡಿಚೇರಿ ಎಂಜಿನಿಯರಿಂಗ್ ಕಾಲೇಜಿನಿಂದ ಪದವೀಧರರಾದ ವಿಜಯ್ 1999ರಲ್ಲಿ ತಮ್ಮ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದರು. ಅವರು ಮೈಕ್ರೋಸಾಫ್ಟ್ನಲ್ಲಿ ತಮ್ಮ ವೃತ್ತಿಪರ ಜೀವನ ಪ್ರಾರಂಭಿಸಿದ್ದರು. ಸುಮಾರು ಒಂದು ದಶಕ ಮೈಕ್ರೋಸಾಫ್ಟ್ನಲ್ಲಿ ಕೆಲಸ ಮಾಡಿದ ಮೇಲೆ 2011ರಲ್ಲಿ ಫೇಸ್ಬುಕ್ಗೆ ಸೇರಿದರು. ಅಲ್ಲಿ ಅನೇಕ ಎಂಜಿನಿಯರಿಂಗ್ ಮತ್ತು ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ವಿಜಯ್ ರಾಜಿ ನಂತರ ಉದ್ಯಮಶೀಲತೆಗೆ ತೆರಳಿದರು. 2021ರಲ್ಲಿ ಅವರು ಉತ್ಪನ್ನ ಪ್ರಯೋಗ (product experimentation) ಮತ್ತು ಸಾಫ್ಟ್ವೇರ್ ಅಭಿವೃದ್ಧಿ ಮೇಲೆ ಕೇಂದ್ರೀಕರಿಸಿದ ತಂತ್ರಜ್ಞಾನ ಕಂಪನಿ ಸ್ಟ್ಯಾಟ್ಸಿಗ್ ಸ್ಥಾಪಿಸಿದ್ದರು. OpenAI 2025 ಸೆಪ್ಟೆಂಬರ್ ನಲ್ಲಿ ಸುಮಾರು 1.1 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದದಲ್ಲಿ ಸ್ಟ್ಯಾಟ್ಸಿಗ್ ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಘೋಷಿಸಿತು. ಸ್ವಾಧೀನದ ನಂತರ ರಾಜಿ OpenAI ನಲ್ಲಿ ಅಪ್ಲಿಕೇಶನ್ಗಳ ಸಿಟಿಒ ಆದರು. ಪ್ರಸ್ತುತ ಅವಸರು ಡೇಟಾ, ಪ್ರಯೋಗ ಮತ್ತು ಅಭಿವೃದ್ಧಿಯ ತಾಂತ್ರಿಕ ತಂಡಗಳನ್ನು ನೋಡಿಕೊಳ್ಳುತ್ತಾರೆ.
ರಾಹುಲ್ ಪಾಟೀಲ್ ಪ್ರಸ್ತುತ Anthropic ನ CTO ಆಗಿದ್ದಾರೆ. ಬೆಂಗಳೂರು ಮೂಲದ ರಾಹುಲ್ 2002ರಲ್ಲಿ PES ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಸೈನ್ಸ್ನಲ್ಲಿ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದರು. ಇದೀಗ ಅದನ್ನು PES ವಿಶ್ವವಿದ್ಯಾಲಯ ಎನ್ನಲಾಗುತ್ತಿದೆ. ನಂತರ ಅವರು ಅಮೆರಿಕಕ್ಕೆ ತೆರಳಿದರು. ಅರಿಜೋನಾ ಸ್ಟೇಟ್ ವಿವಿಯಿಂದ ಕಂಪ್ಯೂಟರ್ ಸೈನ್ಸ್ ಸ್ನಾತಕೋತ್ತರ ಪದವಿ ಮತ್ತು ವಾಷಿಂಗ್ಟನ್ ವಿವಿಯಿಂದ ಎಂಬಿಎ ಪದವಿ ಗಳಿಸಿದರು.
ಅವರ ವೃತ್ತಿ ಜೀವನದಲ್ಲಿ ಒರಾಕಲ್, ಮೈಕ್ರೋಸಾಫ್ಟ್ ಮತ್ತು ಅಮೆಝಾನ್ ವೆಬ್ ಸೇವೆಗಳಲ್ಲಿ ಹಿರಿಯ ತಂತ್ರಜ್ಞಾನ ಪಾತ್ರಗಳನ್ನು ಒಳಗೊಂಡು ದಶಕಗಳ ಕಾಲ ಅನುಭವವಿದೆ. Stripe ಗೆ ತೆರಳುವ ಮೊದಲು AWS ನಲ್ಲಿ ಪಾಟೀಲ್ ತಂತ್ರಜ್ಞಾನ ಮೂಲಸೌಕರ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದ್ದಾರೆ. ಅಂತಿಮವಾಗಿ ಕಂಪನಿಯ CTO ಆದರು.
2025 ಅಕ್ಟೋಬರ್ನಲ್ಲಿ ಪಾಟೀಲ್ CTO ಆಗಿ Anthropic ಸೇರಿದರು. ಅವರು ಈಗ ಕಂಪನಿಯ ಎಂಜಿನಿಯರಿಂಗ್ ಸಂಸ್ಥೆಯನ್ನು ಮುನ್ನಡೆಸುತ್ತಾರೆ. ಪ್ರೊಡಕ್ಟ್ ಎಂಜಿನಿಯರಿಂಗ್, ಕಂಪ್ಯೂಟ್, ಇನ್ಫ್ರಾಸ್ಟ್ರಕ್ಚರ್, ಇನ್ಫರೆನ್ಸ್, ಡೇಟಾ ಸೈನ್ಸ್ ಮತ್ತು ಭದ್ರತೆ ಸೇರಿದಂತೆ ಕ್ಷೇತ್ರಗಳನ್ನು ನೋಡಿಕೊಳ್ಳುತ್ತಾರೆ.
ವಿಜಯ್ ಮತ್ತು ರಾಹುಲ್ ಭಿನ್ನ ವೃತ್ತಿಜೀವನ ಅನುಸರಿಸಿದರೂ ಭಾರತದ ಎಂಜಿನಿಯರಿಂಗ್ ಕಾಲೇಜುಗಳಿಂದ ಜಾಗತಿಕ ತಂತ್ರಜ್ಞಾನ ಉದ್ಯಮದಲ್ಲಿ ಹಿರಿಯ ಪಾತ್ರಗಳಿಗೆ ಪ್ರಗತಿ ಸಾಧಿಸಿದವರು. ಇದೀಗ ಟೈಮ್ ಮ್ಯಾಗಜೀನ್ನ ‘ವರ್ಷದ ಕಾರ್ಯನಿರ್ವಾಹಕರು: ತಂತ್ರಜ್ಞಾನ ಮತ್ತು ಡೇಟಾ’ ಪಟ್ಟಿಯಲ್ಲಿ ಇವರ ಹೆಸರುಗಳಿರುವುದು ದೊಡ್ಡ ಸಾಧನೆಯಾಗಿದೆ.






