ಸೇನಾ ಮುಖ್ಯಸ್ಥ ಮುನಿರ್ ವೈಯಕ್ತಿಕ ಪ್ರತೀಕಾರಕ್ಕಾಗಿ ಪತ್ನಿಯನ್ನು ಗುರಿಯಾಗಿಸಿಕೊಂಡಿದ್ದಾರೆ: ಇಮ್ರಾನ್ ಖಾನ್ ಆರೋಪ

ಇಮ್ರಾನ್ ಖಾನ್ | PC : PTI
ಲಾಹೋರ್: ತನ್ನ ಪತ್ನಿ ಬುಷ್ರಾ ಬೀಬಿಯನ್ನು ಸೇನಾ ಮುಖ್ಯಸ್ಥ ಆಸಿಮ್ ಮುನಿರ್ ವೈಯಕ್ತಿಕ ಪ್ರತೀಕಾರಕ್ಕಾಗಿ ಗುರಿಯಾಗಿಸಿಕೊಂಡಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆರೋಪಿಸಿದ್ದಾರೆ.
ತಾನು ಪ್ರಧಾನಿಯಾಗಿದ್ದಾಗ ಮುನಿರ್ ರನ್ನು ಐಎಸ್ಐ ಮುಖ್ಯಸ್ಥರ ಹುದ್ದೆಯಿಂದ ವಜಾಗೊಳಿಸಿದ್ದೆ. ಈ ವಿಷಯವನ್ನು ಚರ್ಚಿಸಲು ಅವರು ಮಧ್ಯವರ್ತಿಗಳ ಮೂಲಕ ನನ್ನ ಪತ್ನಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದರು. ಆದರೆ ಇಂತಹ ವಿಷಯದಲ್ಲಿ ತಾನು ಹಸ್ತಕ್ಷೇಪ ನಡೆಸುವುದಿಲ್ಲ ಎಂದು ಬುಷ್ರಾ ಬೀಬಿ ಸ್ಪಷ್ಟವಾಗಿ ನಿರಾಕರಿಸಿದರು. ಈಗ ಬುಷ್ರಾ ಬೀಬಿ ಅನ್ಯಾಯವಾಗಿ 14 ತಿಂಗಳ ಸೆರೆವಾಸ ಮತ್ತು ಜೈಲಿನಲ್ಲಿ ಶೋಚನೀಯ ಅಮಾನವೀಯ ಸ್ಥಿತಿ ಎದುರಿಸಲು ಮುನೀರ್ ಮುಖ್ಯ ಕಾರಣವಾಗಿದ್ದಾರೆ' ಎಂದು ಇಮ್ರಾನ್ ಖಾನ್ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ನನ್ನ ಪತ್ನಿಯನ್ನು ವೈಯಕ್ತಿಕ ಕಾರಣಕ್ಕಾಗಿ ಗುರಿಯಾಗಿಸಿಕೊಳ್ಳಲಾಗಿದೆ. ಯಾವುದೇ ಅಪರಾಧದ ಪುರಾವೆಗಳಿಲ್ಲದೆ ಆಕೆಯನ್ನು ಬಂಧಿಸಿ ಜೈಲಿನಲ್ಲಿ ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ' ಎಂದು ಹಲವಾರು ಪ್ರಕರಣಗಳಿಗೆ ಸಂಬಂಧಿಸಿ 2023ರ ಮಧ್ಯಭಾಗದಿಂದ ಜೈಲಿನಲ್ಲಿರುವ ಇಮ್ರಾನ್ ಖಾನ್ ಹೇಳಿದ್ದಾರೆ.





