ಮೀಸಲು ಸ್ಥಾನಗಳಿಗೆ ಸೂಚನೆ ಹೊರಡಿಸಲು ಇಮ್ರಾನ್ ಪಕ್ಷದ ಆಗ್ರಹ

ಇಮ್ರಾನ್ ಖಾನ್ (Photo: PTI)
ಇಸ್ಲಮಾಬಾದ್: ಮೀಸಲು ಸ್ಥಾನಗಳಿಗೆ ಅಧಿಸೂಚನೆ ಹೊರಡಿಸದೆ ಯಾವುದೇ ಪ್ರಾಂತೀಯ ವಿಧಾನಸಭೆಯ ಅಧಿವೇಶನ ಕರೆಯುವಂತಿಲ್ಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್(ಪಿಟಿಐ) ಪಕ್ಷ ಹೇಳಿದೆ.
ಪಂಜಾಬ್ ಮತ್ತು ಸಿಂಧ್ ಪ್ರಾಂತದ ವಿಧಾನಸಭೆ ಅಧಿವೇಶನ ಕರೆದು ಮುಖ್ಯಮಂತ್ರಿಗಳು ಪ್ರಮಾಣ ವಚನ ಸ್ವೀಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಪಿಟಿಐ ಪಕ್ಷದ ಮುಖಂಡ ಗೋಹರ್ ಖಾನ್ `ಇದು ಕಾನೂನುಬಾಹಿರ ಕ್ರಮ. ಯಾಕೆಂದರೆ ಮೀಸಲು ಸ್ಥಾನಗಳ ಬಗ್ಗೆ ಅಧಿಸೂಚನೆ ಹೊರಡಿಸದೆ ಅಧಿವೇಶನ ಕರೆಯಲಾಗಿದೆ. ಈ ಪರಿಸ್ಥಿತಿಯಲ್ಲಿ ರಾಷ್ಟ್ರೀಯ ಸಂಸತ್ ಅಧಿವೇಶನವನ್ನೂ ಕರೆಯುವಂತಿಲ್ಲ' ಎಂದಿದ್ದಾರೆ. ಫೆಬ್ರವರಿ 8ರಂದು ನಡೆದಿದ್ದ ಸಾರ್ವತ್ರಿಕ ಚುನಾವಣೆಯಲ್ಲಿ ಪಿಟಿಐಗೆ `ಬ್ಯಾಟ್' ಚಿಹ್ನೆ ನೀಡಲು ಚುನಾವಣಾ ಆಯೋಗ ನಿರಾಕರಿಸಿದ್ದರಿಂದ ಪಿಟಿಐ ಅಭ್ಯರ್ಥಿಗಳು ಪಕ್ಷೇತರರಾಗಿ ಸ್ಪರ್ಧಿಸಿ 92 ಸ್ಥಾನಗಳಲ್ಲಿ ಗೆದ್ದಿದ್ದರು. ಬಳಿಕ ಪಿಟಿಐ ಬೆಂಬಲಿತ ಅಭ್ಯರ್ಥಿಗಳು `ಸುನ್ನಿ ಇತ್ತೆಹಾದ್ ಕೌನ್ಸಿಲ್(ಎಸ್ಐಸಿ)' ಪಕ್ಷಕ್ಕೆ ಬೆಂಬಲ ಸೂಚಿಸಿದ್ದರು.
ಈ ಹಿನ್ನೆಲೆಯಲ್ಲಿ ಎಸ್ಐಸಿ ಪಕ್ಷಕ್ಕೆ ಮೀಸಲು ಸ್ಥಾನಗಳನ್ನು ತಕ್ಷಣ ನಿಗದಿಗೊಳಿಸಬೇಕು ಎಂದು ಗೋಹರ್ ಖಾನ್ ಆಗ್ರಹಿಸಿದ್ದಾರೆ.





