Flydubai ವಿಮಾನದಲ್ಲಿ ದಾಳಿ | ಪೈಲಟ್ ಮೇಲೆ ಹಲ್ಲೆ ನಡೆಸಿದ ಸಹ ಪೈಲಟ್ ಗೆ ತೀವ್ರಗಾಮಿ ನಂಟಿನ ಆರೋಪ
ಒಮನ್ ನಲ್ಲಿ ವಿಮಾನ ಹಾರಿಸದಂತೆ ಈ ಹಿಂದೆ ನಿರ್ಬಂಧಿಸಲಾಗಿತ್ತು: ವರದಿ

Photo Credit : PTI
ಹೊಸದಿಲ್ಲಿ, ಅ.3: ದುಬೈನಿಂದ ಟೆಲ್ ಅವಿವ್ ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಕಾಕ್ಪಿಟ್ ನೊಳಗೆ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸಹ ಪೈಲಟ್ ನನ್ನು ಹಮಮ್ ಅಲ್ ಹಮಮಿ ಎಂದು ಗುರುತಿಸಲಾಗಿದೆ. ಈತನ ತೀವ್ರಗಾಮಿ ನಿಲುವಿನ ಕುರಿತು ಈ ಹಿಂದೆಯೇ ಕಳವಳ ವ್ಯಕ್ತವಾಗಿತ್ತು ಎಂದು ‘ಅಲ್ ಅರೇಬಿಯಾ ಇಂಗ್ಲಿಷ್’ ಮೂಲಗಳನ್ನು ಉಲ್ಲೇಖಿಸಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಹಮಮ್ ಅಲ್ ಹಮಮಿಯ ತೀವ್ರಗಾಮಿ ನಿಲುವಿನ ಕಾರಣದಿಂದ ಒಮಾನ್ ನಲ್ಲಿ ವಿಮಾನ ಹಾರಿಸದಂತೆ ಈ ಹಿಂದೆ ನಿರ್ಬಂಧಿಸಲಾಗಿತ್ತು ಎಂದು ಹಲವು ವರದಿಗಳು ತಿಳಿಸಿವೆ. ಫೆಲೆಸ್ತೀನಿಯನ್ನರಿಗೆ ಬೆಂಬಲ ಮತ್ತು ಇಸ್ರೇಲ್ ವಿರುದ್ಧ ದ್ವೇಷದ ಭಾವನೆಯನ್ನು ಹಮಮ್ ಅಲ್ ಹಮಮಿ ಪದೇ ಪದೇ ವ್ಯಕ್ತಪಡಿಸಿದ್ದ ಎನ್ನಲಾಗಿದೆ.
ಸಿರಿಯಾದಲ್ಲಿ ತೀವ್ರಗಾಮಿ ವಿಚಾರಗಳಿಂದ ಪ್ರಭಾವ?
ಒಮನ್ ನಲ್ಲಿ ವಿಮಾನ ಹಾರಿಸುವುದಕ್ಕೆ ನಿರ್ಬಂಧ ಎದುರಾದ ಬಳಿಕ ಹಮಮ್ ಅಲ್ ಹಮಮಿ ದೇಶ ತೊರೆದಿದ್ದ. ಆ ಬಳಿಕ ಹೆಚ್ಚಿನ ಸಮಯವನ್ನು ಒಮನ್ ನ ಹೊರಗೆ, ವಿಶೇಷವಾಗಿ ಸಿರಿಯಾದಲ್ಲಿ ಕಳೆದಿದ್ದ ಎನ್ನಲಾಗಿದ್ದು, ಯುಎಇಗೆ ತೆರಳುವ ಮುನ್ನ ಸಿರಿಯಾದಲ್ಲಿ ಆತನು ತೀವ್ರಗಾಮಿ ವಿಚಾರಗಳಿಂದ ಪ್ರಭಾವಿತನಾಗಿದ್ದ ಎಂದು ವರದಿ ತಿಳಿಸಿದೆ.
ಹಮಮ್ ಅಲ್ ಹಮಮಿ ಈ ಹಿಂದೆ ಒಮನ್ ನ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ‘ಒಮನ್ ಏರ್’ನಲ್ಲಿ ತರಬೇತಿ ಹುದ್ದೆಯಲ್ಲಿದ್ದ ಎಂದು ತಿಳಿದು ಬಂದಿದೆ. ಆತನ ತೀವ್ರಗಾಮಿ ನಿಲುವಿನ ಕುರಿತು ಕಳವಳ ವ್ಯಕ್ತವಾದ ಹಿನ್ನೆಲೆಯಲ್ಲಿ ಕಳೆದ ವರ್ಷ ಆ ಹುದ್ದೆಯಿಂದ ತೆಗೆದುಹಾಕಲಾಗಿತ್ತು ಎಂದು CNN ವರದಿ ಮಾಡಿದೆ.
ಆದರೆ, ಬಳಿಕ ಹಮಮ್ ಅಲ್ ಹಮಮಿಗೆ ಒಮನ್ ಏರ್ ನಲ್ಲೇ ಮತ್ತೊಂದು ಹುದ್ದೆ ನೀಡಲಾಗಿತ್ತು ಎಂದು ಪ್ರಾದೇಶಿಕ ರಾಜತಾಂತ್ರಿಕ ಮೂಲವನ್ನು ಉಲ್ಲೇಖಿಸಿ Times Of India ವರದಿ ತಿಳಿಸಿದೆ.
ಹಮಮ್ ಅಲ್ ಹಮಮಿಗೆ ಸೇರಿದ ವಸ್ತುಗಳಲ್ಲಿ ‘ಫ್ರೀ ಫೆಲೆಸ್ತೀನ್’ ಕರಪತ್ರಗಳು, ಪ್ರಕಟಣೆಗಳು ಹಾಗೂ ಇತರ ಫೆಲೆಸ್ತೀನ್ ಪರ ಸಾಮಗ್ರಿಗಳು ಪತ್ತೆಯಾಗಿದ್ದವು ಎಂದು ‘i24 ನ್ಯೂಸ್’ ಯುಎಇ ಮೂಲವೊಂದನ್ನು ಉಲ್ಲೇಖಿಸಿ ವರದಿ ಮಾಡಿದೆ.
ಹಮಮ್ ಅಲ್ ಹಮಮಿ ಫೆಲೆಸ್ತೀನಿಯನ್ನರಿಗೆ ಬೆಂಬಲ ಮತ್ತು ಇಸ್ರೇಲ್ ವಿರುದ್ಧ ದ್ವೇಷವನ್ನು ಪದೇ ಪದೇ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ಮೂಲಭೂತವಾದದತ್ತ ಆತನ ಒಲವು ಹಾಗೂ ಸಂಭಾವ್ಯ ಭಯೋತ್ಪಾದಕ ಉದ್ದೇಶಗಳ ಕುರಿತು ನಡೆಯುತ್ತಿರುವ ತನಿಖೆಯ ಭಾಗವಾಗಿ ಈ ಸಾಮಗ್ರಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಟೆಲ್ ಅವಿವ್ ವಿಮಾನದಲ್ಲಿ ಕರ್ತವ್ಯಕ್ಕೆ ಅನುಮತಿ ಸಿಕ್ಕಿದ್ದು ಹೇಗೆ?
ಒಮನ್ ಮತ್ತು ಇಸ್ರೇಲ್ ನಡುವೆ ರಾಜತಾಂತ್ರಿಕ ಸಂಬಂಧವಿಲ್ಲ. ಇಸ್ರೇಲ್ ಅನ್ನು ಒಮನ್ ಅಧಿಕೃತವಾಗಿ ಗುರುತಿಸಿಲ್ಲ. ಹೀಗಿರುವಾಗ, ಒಮನ್ ಪ್ರಜೆಯಾಗಿರುವ ಹಮಮ್ ಅಲ್ ಹಮಮಿ ಇಸ್ರೇಲ್ ನ ಟೆಲ್ ಅವಿವ್ಗೆ ತೆರಳುವ ಫ್ಲೈದುಬೈ ವಿಮಾನದಲ್ಲಿ ಸಹ ಪೈಲಟ್ ಆಗಿ ಕರ್ತವ್ಯ ನಿರ್ವಹಿಸಲು ಹೇಗೆ ಅವಕಾಶ ಪಡೆದಿದ್ದು ಹೇಗೆ ಎಂಬ ಪ್ರಶ್ನೆ ಈಗ ಎದುರಾಗಿದೆ.
ಹಮಮ್ ಅಲ್ ಹಮಮಿ ಫ್ಲೈದುಬೈ ವಿಮಾನದ ಸಿಬ್ಬಂದಿಯಾಗಿ ನೇಮಕಗೊಂಡಿದ್ದು ಹೇಗೆ ಎಂಬುದರ ಕುರಿತು ಇಸ್ರೇಲ್ನ ಶಿನ್ ಬೆಟ್, ಮೊಸಾದ್, ಸೇನೆ ಮತ್ತು ಸಾರಿಗೆ ಸಚಿವಾಲಯ ಸೇರಿದಂತೆ ಹಲವು ಸಂಸ್ಥೆಗಳು ತನಿಖೆ ನಡೆಸುತ್ತಿವೆ ಎಂದು ಇಸ್ರೇಲಿ ಅಧಿಕಾರಿಯೊಬ್ಬರು CNNಗೆ ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಹಮಮ್ ಅಲ್ ಹಮಮಿ ಒಮಾನ್ ಪ್ರಜೆ. ಯುಎಇಯಲ್ಲಿ ಒಮನ್ ಮೂಲದ ತಂದೆ ಮತ್ತು ಸಿರಿಯಾ ಮೂಲದ ತಾಯಿಗೆ ಜನಿಸಿದ್ದ ಹಮಮ್ ಅಲ್ ಹಮಮಿ ಹಲವು ವರ್ಷಗಳನ್ನು ಯುಎಇಯಲ್ಲಿ ಕಳೆದಿದ್ದ ಎಂದು ತಿಳಿದು ಬಂದಿದೆ. ‘ಜೆರುಸಲೆಮ್ ಪೋಸ್ಟ್’ ವರದಿ ಮಾಡಿರುವಂತೆ, ಹಮಮ್ ಅಲ್ ಹಮಮಿ ಬೇರೆ ಯಾವುದೇ ದೇಶದ ಪೌರತ್ವ ಹೊಂದಿರಲಿಲ್ಲ.
CNN ವರದಿ ಪ್ರಕಾರ, ಫ್ಲೈದುಬೈನಲ್ಲಿ ಕೇವಲ ಎಂಟು ತಿಂಗಳು ಕೆಲಸ ಮಾಡಿದ್ದ ಎಂದು ತಿಳಿದು ಬಂದಿದೆ. ಇದಕ್ಕೂ ಮೊದಲು ಹಮಮ್ ಅಲ್ ಹಮಮಿ ಮೊರಾಕೊದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ‘ರಾಯಲ್ ಏರ್ ಮಾರೊಕ್’ನಲ್ಲಿದ್ದನು.
ಸೌದಿ ಅರೇಬಿಯದ ತಬೂಕ್ ನಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಬಳಿಕ ಹಮಮ್ ಅಲ್ ಹಮಮಿಯನ್ನು, ಸೌದಿ ಅರೇಬಿಯಾದಿಂದ ಯುಎಇಗೆ ವರ್ಗಾಯಿಸಲಾಯಿತು ಎಂದು ವರದಿಯಾಗಿದೆ. ಆತನ ವಿರುದ್ಧ ಯುಎಇಯಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ತನಿಖೆಗೆ ಚಾಲನೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಕೇವಲ ಎರಡು ನಿಮಿಷದಲ್ಲಿ 16,000 ಅಡಿ ಕೆಳಕ್ಕೆ!
ಸೆ.30ರಂದು ದುಬೈನಿಂದ ಟೆಲ್ ಅವಿವ್ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಈ ಘಟನೆ ನಡೆದಿದೆ. ಕಾಕ್ಪಿಟ್ನೊಳಗೆ ಕ್ಯಾಪ್ಟನ್ ಮಚ್ಚರ್ ಅವರ ಮೇಲೆ ಹಮಮ್ ಅಲ್ ಹಮಮಿ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಘಟನೆಯನ್ನು ಸಂಭಾವ್ಯ ಭಯೋತ್ಪಾದಕ ಕೃತ್ಯದ ದೃಷ್ಟಿಕೋನದಿಂದ ತನಿಖೆ ನಡೆಸಲಾಗುತ್ತಿದೆ.
ಹಲ್ಲೆಯ ಬಳಿಕ ವಿಮಾನ ತೀವ್ರವಾಗಿ ಕೆಳಮುಖವಾಗಿ ಚಲಿಸತೊಡಗಿತು. ಅಪಹರಣದ ತುರ್ತು ಸಂದೇಶ ರವಾನಿಸುವ ಮುನ್ನವೇ ಕೇವಲ ಎರಡು ನಿಮಿಷಗಳಲ್ಲಿ ವಿಮಾನ ಸುಮಾರು 16,000 ಅಡಿ ಕೆಳಕ್ಕೆ ಇಳಿಯಿತು ಎಂದು ವರದಿಯಾಗಿದೆ.
ತೀವ್ರ ಗಾಯಗಳಾಗಿದ್ದರೂ ಕ್ಯಾಪ್ಟನ್ ಮಚ್ಚರ್ ದಾಳಿಯನ್ನು ಎದುರಿಸಿ ಕಾಕ್ಪಿಟ್ ನ ಬಾಗಿಲು ತೆರೆಯುವಲ್ಲಿ ಯಶಸ್ವಿಯಾದರು. ಬಳಿಕ ವಿಮಾನ ಸಿಬ್ಬಂದಿ ಮತ್ತು ಪ್ರಯಾಣಿಕರು ಕಾಕ್ಪಿಟ್ಗೆ ಪ್ರವೇಶಿಸಿ ಹಮಮ್ ಅಲ್ ಹಮಮಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಇದರಿಂದ ಸಿಬ್ಬಂದಿಗೆ ವಿಮಾನದ ನಿಯಂತ್ರಣವನ್ನು ಮರಳಿ ಪಡೆಯಲು ಸಾಧ್ಯವಾಯಿತು.
ಅದೇ ವಿಮಾನದಲ್ಲಿದ್ದ ಕರ್ತವ್ಯದಲ್ಲಿರದ ಇಬ್ಬರು ಪೈಲಟ್ಗಳು ಕೂಡ ವಿಮಾನದ ನಿಯಂತ್ರಣ ಪಡೆಯಲು ನೆರವಾದರು.
ಬಳಿಕ ವಿಮಾನವನ್ನು ಸೌದಿ ಅರೇಬಿಯದ ತಬೂಕ್ನಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು. ವಿಮಾನದಲ್ಲಿದ್ದ ಎಲ್ಲ 180 ಮಂದಿ ಸುರಕ್ಷಿತವಾಗಿ ಕೆಳಗಿಳಿದರು.






