ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಫೆಲೆಸ್ತೀನೀಯರ ಮೇಲಿನ ಆಕ್ರಮಣಗಳಲ್ಲಿ ಹೆಚ್ಚಳ: ವಿಶ್ವಸಂಸ್ಥೆಯ ಮಾನವಹಕ್ಕುಗಳ ಸಂಸ್ಥೆ

ಸಾಂದರ್ಭಿಕ ಚಿತ್ರ (PTI)
ಜಿನೀವ: ಹೊರಗಿನಿಂದ ಬಂದು ಆಕ್ರಮಿತ ಪಶ್ಚಿಮ ದಂಡೆಯಲ್ಲಿ ನೆಲೆಸಿರುವವರು ಮತ್ತು ಭದ್ರತಾ ಪಡೆಗಳು ಫೆಲೆಸ್ತೀನೀಯರ ವಿರುದ್ಧ ನಡೆಸುತ್ತಿರುವ ಆಕ್ರಮಣಗಳು ಮತ್ತು ಹತ್ಯೆಗಳು ಇತ್ತೀಚಿನ ವಾರಗಳಲ್ಲಿ ಹೆಚ್ಚಾಗಿದೆ ಎಂದು ವಿಶ್ವಸಂಸ್ಥೆಯ ಮಾನವಹಕ್ಕುಗಳ ಕಚೇರಿಯು ಮಂಗಳವಾರ ಹೇಳಿದೆ.
‘‘ಪೂರ್ವ ಜೆರುಸಲೇಮ್ ಸೇರಿದಂತೆ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ನೆಲೆಸಿರುವ ಇಸ್ರೇಲೀಯರು ಮತ್ತು ಇಸ್ರೇಲ್ ಭದ್ರತಾ ಸಿಬ್ಬಂದಿ ಫೆಲೆಸ್ತೀನೀಯರ ಮೇಲೆ ನಡೆಸುತ್ತಿರುವ ಆಕ್ರಮಣಗಳು, ಅವರ ಹತ್ಯೆಗಳು ಮತ್ತು ಅವರಿಗೆ ನೀಡುತ್ತಿರುವ ಕಿರುಕುಳಗಳನ್ನು ಕಳೆದ ವಾರಗಳಲ್ಲಿ ಹೆಚ್ಚಿಸಿದ್ದಾರೆ’’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಶನರ್ ಕಚೇರಿ (ಒಎಚ್ಸಿಎಚ್ಆರ್)ಯ ವಕ್ತಾರರೊಬ್ಬರು ಜಿನೀವದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಇಸ್ರೇಲ್ ಸೇನೆಯು ತನ್ನ ‘‘ಅಯರ್ನ್ ವಾಲ್’’ ಕಾರ್ಯಾಚರಣೆಯನ್ನು ಆರಂಭಿಸಿದಂದಿನಿಂದ ಆಕ್ರಮಿತ ಪಶ್ಚಿಮ ದಂಡೆಯ ಉತ್ತರ ಭಾಗದಲ್ಲಿ ಸುಮಾರು 30,000 ಫೆಲೆಸ್ತೀನೀಯರು ಬಲವಂತಕ್ಕೊಳಗಾಗಿ ನಿರ್ವಸಿತರಾಗಿದ್ದಾರೆ.
ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿ ಪಶ್ಚಿಮ ದಂಡೆಯನ್ನು ಇಸ್ರೇಲ್ ಗೆ ಸೇರ್ಪಡೆಗೊಳಿಸುವ ಪೂರ್ವಭಾವಿ ಸಿದ್ಧತೆಗಳ ಭಾಗವಾಗಿ ಇದನ್ನು ಮಾಡಲಾಗುತ್ತಿದೆ ಎಂದು ಒಎಚ್ಸಿಎಚ್ಆರ್ ಹೇಳಿದೆ.
ಪಶ್ಚಿಮ ದಂಡೆಯಲ್ಲಿ, ಜೂನ್ ನಲ್ಲಿ ಎರಡು ದಶಕಗಳಿಗೂ ಅಧಿಕ ಅವಧಿಯಲ್ಲೇ ಅತ್ಯಂತ ಹೆಚ್ಚಿನ ಫೆಲೆಸ್ತೀನೀಯರು ಗಾಯಗೊಂಡಿರುವುದನ್ನು ವಿಶ್ವಸಂಸ್ಥೆ ದಾಖಲಿಸಿದೆ.
ಜನವರಿಯ ಬಳಿಕ, ಫೆಲೆಸ್ತೀನೀಯರು ಅಥವಾ ಅವರ ಸೊತ್ತುಗಳ ಮೇಲೆ ಹೊರಗಿನಿಂದ ಬಂದು ನೆಲೆಸಿದವರಿಂದ 757 ಆಕ್ರಮಣ ಪ್ರಕರಣಗಳು ನಡೆದಿವೆ. ಇದು ಕಳೆದ ವರ್ಷದ ಇದೇ ಅವಧಿಯಲ್ಲಿ ನಡೆದ ಆಕ್ರಮಣಗಳಿಗಿಂತ 13 ಶೇಕಡ ಅಧಿಕವಾಗಿದೆ.
2023 ಅಕ್ಟೋಬರ್ 7ರ ಬಳಿಕ, ಪೂರ್ವ ಜೆರುಸಲೇಮ್ ಸೇರಿದಂತೆ ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ಅತಿಕ್ರಮಣಕಾರರು ಮತ್ತು ಇಸ್ರೇಲಿ ಸೈನಿಕರು ಕನಿಷ್ಠ 964 ಫೆಲೆಸ್ತೀನೀಯರನ್ನು ಕೊಂದಿದ್ದಾರೆ. ಇದೇ ಅವಧಿಯಲ್ಲಿ, ಫೆಲೆಸ್ತೀನೀಯರು ನಡೆಸಿರುವ ದಾಳಿಯಲ್ಲಿ ಅಥವಾ ಸಶಸ್ತ್ರ ಸಂಘರ್ಷಗಳಲ್ಲಿ 53 ಇಸ್ರೇಲೀಯರು ಹತರಾಗಿದ್ದಾರೆ ಎಂದು ಒಎಚ್ಸಿಎಚ್ಆರ್ ತಿಳಿಸಿದೆ.







