ಪೆಟ್ರೋಲ್ ಉತ್ಪಾದನೆ ಹೆಚ್ಚಳ, ಭದ್ರತೆಗೆ ಆದ್ಯತೆ: `ಶಾಂತಿ ಘೋಷಣೆ'ಯಲ್ಲಿ ಟ್ರಂಪ್, ಕ್ಸಿ ಜಿಂಪಿಂಗ್, ಪುಟಿನ್ ಪ್ರತಿಜ್ಞೆ

Photo Credit : PTI
ಬೀಜಿಂಗ್: ಶೆನ್ಜೆನ್ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಚೀನಾದ ಅಧ್ಯಕ್ಷ ಕ್ಸಿ ಜಿಂಪಿಂಗ್ ಮತ್ತು ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಐತಿಹಾಸಿಕ ತ್ರಿಪಕ್ಷೀಯ ಸಭೆ ನಡೆಸಿದ ನಂತರ ಚೀನಾ, ರಶ್ಯ ಮತ್ತು ಅಮೆರಿಕ ದೇಶಗಳು `ಶಾಂತಿ ಘೋಷಣೆ'ಯನ್ನು ಪ್ರಕಟಿಸಿವೆ.
ಈ ಘೋಷಣೆಯು ಪರಮಾಣು ನಿಶ್ಯಸ್ತ್ರೀಕರಣ, ವ್ಯಾಪಾರ, ಸಂಸ್ಕರಿಸಿದ ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆಯನ್ನು ಹೆಚ್ಚಿಸುವುದು ಮತ್ತು ಇತರ ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಿದೆ ಎಂದು ಚೀನಾದ ಸರಕಾರಿ ಸ್ವಾಮ್ಯದ ಮಾಧ್ಯಮ ಕ್ಸಿನ್ಹುವಾ ತಿಳಿಸಿದೆ. ಶೆನ್ಜೆನ್ ಸಭೆಯ ನಂತರ ಹೊರಡಿಸಲಾದ ಜಂಟಿ ಹೇಳಿಕೆಯಲ್ಲಿ ` ಮೂರೂ ದೇಶಗಳ ಮುಖ್ಯಸ್ಥರು ಪ್ರಸ್ತುತ ಅಂತಾರಾಷ್ಟ್ರೀಯ ಪರಿಸ್ಥಿತಿಯ ಕುರಿತು ಆಳವಾದ ಅಭಿಪ್ರಾಯ ವಿನಿಮಯ ನಡೆಸಿದರು ಮತ್ತು ಕಾರ್ಯತಂತ್ರದ ಸ್ಥಿರತೆ ಹಾಗೂ ಅಂತಾರಾಷ್ಟ್ರೀಯ ಭದ್ರತೆಯನ್ನು ಎತ್ತಿಹಿಡಿಯಲು ಬದ್ಧರಾಗಿರುವುದಾಗಿ ಪ್ರತಿಜ್ಞೆ ಮಾಡಿದ್ದಾರೆ' ಎಂದು ತಿಳಿಸಲಾಗಿದೆ.
ವರದಿಯ ಪ್ರಕಾರ, ರಶ್ಯ, ಚೀನಾ ಮತ್ತು ಅಮೆರಿಕ ತೈಲ ಪೂರೈಕೆಯನ್ನು ಹೆಚ್ಚಿಸಲು ಯೋಜಿಸಿವೆ. ಉಕ್ರೇನ್ ಮತ್ತು ಇರಾನ್ನಲ್ಲಿ ನಡೆಯುತ್ತಿರುವ ಸಂಘರ್ಷಗಳಿಂದಾಗಿ ಜಾಗತಿಕ ಇಂಧನ ಪೂರೈಕೆ ಸರಪಳಿಯ ಮೇಲೆ ತೀವ್ರ ಪರಿಣಾಮ ಬೀರಿರುವ ಹಿನ್ನೆಲೆಯಲ್ಲಿ ಈ ಹೊಸ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಶಾಂತಿ ಘೋಷಣೆಯು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ಐಸಿಜೆ) ಜೊತೆಗಿನ ಭಿನ್ನಾಭಿಪ್ರಾಯವನ್ನೂ ಒಳಗೊಂಡಿದ್ದು, ವಿಶ್ವಸಂಸ್ಥೆಯ ಈ ಸಂಸ್ಥೆಯು ರಾಷ್ಟ್ರವೊಂದರ ಸಾರ್ವಭೌಮತ್ವವನ್ನು ಗೌರವಿಸಬೇಕು ಎಂದು ಮೂವರೂ ನಾಯಕರು ಕರೆ ನೀಡಿದ್ದಾರೆ. ಉಕ್ರೇನ್, ಇರಾನ್ ಸಂಘರ್ಷಗಳು ಮತ್ತು ಉತ್ತರ ಕೊರಿಯಾದ ಹೆಚ್ಚುತ್ತಿರುವ ಕ್ಷಿಪಣಿ ಚಟುವಟಿಕೆಯಿಂದಾಗಿ ಕೊರಿಯನ್ ಪರ್ಯಾಯ ದ್ವೀಪದಲ್ಲಿ ಉಂಟಾಗಿರುವ ಬೆದರಿಕೆಗಳ ಕುರಿತೂ ಮೂವರು ನಾಯಕರು ಚರ್ಚಿಸಿದ್ದಾರೆ ಎಂದು `ಕ್ಸಿನ್ಹುವಾ' ವರದಿ ಮಾಡಿದೆ.
ಪರಮಾಣು ಯುದ್ಧ `ಎಂದಿಗೂ ನಡೆಯಬಾರದು'
ಪರಮಾಣು ಯುದ್ಧವನ್ನು ಗೆಲ್ಲಲು ಸಾಧ್ಯವಿಲ್ಲ ಮತ್ತು ಅದು ಎಂದಿಗೂ ನಡೆಯಬಾರದು ಎಂದು ಕ್ಸಿ ಜಿಂಪಿಂಗ್ ಪುಟಿನ್ ಮತ್ತು ಟ್ರಂಪ್ ಪುನರುಚ್ಚರಿಸಿದ್ದಾರೆ. ಪರಮಾಣು ಅಪಾಯಗಳನ್ನು ಕಡಿಮೆ ಮಾಡಲು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಪ್ರಸರಣವನ್ನು ತಡೆಯಲು ಮಾತುಕತೆ ನಡೆಸುವುದಾಗಿ ಅವರು ಬದ್ಧತೆ ತೋರಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯರಾಗಿ, ಜಾಗತಿಕ ಸವಾಲುಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಸ್ಪಂದಿಸಲು ಮತ್ತು ಅಂತರ್ರಾಷ್ಟ್ರೀಯ ಶಾಂತಿ ಹಾಗೂ ಭದ್ರತೆಯನ್ನು ಕಾಪಾಡುವ ತನ್ನ ಮೂಲಭೂತ ಧ್ಯೇಯವನ್ನು ಉತ್ತಮವಾಗಿ ಪೂರೈಸಲು ವಿಶ್ವಸಂಸ್ಥೆಯನ್ನು ಸುಧಾರಿಸಲು ಚೀನಾ, ರಶ್ಯ ಮತ್ತು ಅಮೆರಿಕ ಬದ್ಧವಾಗಿವೆ ಎಂದು `ಶಾಂತಿ ಘೋಷಣೆ' ತಿಳಿಸಿದೆ.
ತೈವಾನ್ ವಿಷಯದ ಬಗ್ಗೆ ಅಮೆರಿಕಕ್ಕೆ ಚೀನಾ ಎಚ್ಚರಿಕೆ
ಶೆನ್ಜೆನ್ನಲ್ಲಿ ಗುರುವಾರ ನಡೆದ ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತುಕತೆಯ ನಂತರ, ಚೀನಾ-ಅಮೆರಿಕ ಸಂಬಂಧಗಳಲ್ಲಿ ಭಾರಿ ಹಿನ್ನಡೆಯನ್ನು ತಪ್ಪಿಸಲು ಅಮೆರಿಕವು ತೈವಾನ್ ವಿಷಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಚೀನಾ ಅಧ್ಯಕ್ಷರು ಆಗ್ರಹಿಸಿರುವುದಾಗಿ ಕ್ಸಿನ್ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.
ತೈವಾನ್ ವಿರೋಧದ ನಡುವೆಯೂ, ಪ್ರಜಾಸತ್ತಾತ್ಮಕವಾಗಿ ಆಡಳಿತ ನಡೆಸುತ್ತಿರುವ ತೈವಾನ್ ಅನ್ನು ಚೀನಾ ತನ್ನದೇ ಭೂಪ್ರದೇಶವೆಂದು ಪರಿಗಣಿಸುತ್ತದೆ ಮತ್ತು ಅಮೆರಿಕದೊಂದಿಗಿನ ಸಂಬಂಧದಲ್ಲಿ ಈ ವಿಷಯವು ಅತ್ಯಂತ ಪ್ರಮುಖ ಮತ್ತು ಸೂಕ್ಷ್ಮವಾಗಿದೆ ಎಂದು ಪ್ರತಿಪಾದಿಸುತ್ತಿದೆ.






