ಖಾಲಿಸ್ತಾನಿ ಪ್ರತ್ಯೇಕತಾವಾದಿಯ ಹತ್ಯೆಯಲ್ಲಿ ಭಾರತದ ಕೈವಾಡ ಆರೋಪ; ಭಾರತದ ಉನ್ನತ ಅಧಿಕಾರಿಯನ್ನು ಉಚ್ಛಾಟಿಸಿದ ಕೆನಡಾ
ಕೆನಡ ಪ್ರಧಾನಿ ಜಸ್ಟಿನ್ ಟ್ರೂಡೋ
ಒಟ್ಟಾವಾ: ಕಳೆದ ಜೂನ್ನಲ್ಲಿ ನಡೆದ ಖಾಲಿಸ್ತಾನಿ ನಾಯಕನ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿರುವ ಕೆನಡಾ, ಒಟ್ಟಾವಾದಲ್ಲಿದ್ದ ಭಾರತೀಯ ಉನ್ನತ ಅಧಿಕಾರಿಯನ್ನು ದೇಶದಿಂದ ಉಚ್ಛಾಟಿಸಿದೆ.
ಈ ರಾಜತಾಂತ್ರಿಕ ಕ್ರಮವು ಭಾರತ ಮತ್ತು ಕೆನಡಾ ನಡುವೆ ಬಿಗಡಾಯಿಸಿರುವ ಸಂಬಂಧವನ್ನು ಇನ್ನಷ್ಟು ಹದಗೆಡುವಂತೆ ಮಾಡಿದೆ.
ಜೂನ್ ನಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದ ಖಾಲಿಸ್ತಾನಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರಿಗೆ ಸಂಬಂಧವಿದೆ ಎಂದು ತಮ್ಮ ಸರ್ಕಾರಕ್ಕೆ ನಂಬಲರ್ಹ ಮಾಹಿತಿ ಸಿಕ್ಕಿದೆ ಎಂದು ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಸಂಸತ್ತಿನ ವಿರೋಧ ಪಕ್ಷದ ತುರ್ತು ಅಧಿವೇಶನದಲ್ಲಿ ಹೇಳಿದ್ದರು.
ಬ್ರಿಟೀಷ್ ಕೊಲಂಬಿಯಾದ ಸರ್ರೆಯಲ್ಲಿರುವ ಸಿಖ್ ಸಾಂಸ್ಕೃತಿಕ ಕೇಂದ್ರದ ಹೊರಗೆ ಸಿಖ್ ಪ್ರತ್ಯೇಕತವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರನ್ನು ಜೂನ್ 18 ರಂದು ಗುಂಡಿಕ್ಕಿ ಕೊಂದ ನಂತರ ಕೆನಡಾದ ಗುಪ್ತಚರ ಸಂಸ್ಥೆಗಳು ಭಾರತದ ವಿರುದ್ಧದ ಆರೋಪಗಳನ್ನು ಪರಿಶೀಲಿಸುತ್ತಿವೆ ಎಂದು ಟ್ರೂಡೊ ಸಂಸತ್ತಿನಲ್ಲಿ ತಿಳಿಸಿದ್ದಾರೆ.