ಅಟ್ಟಾರಿ ಗಡಿ ಮೂಲಕ 160 ಅಫ್ಘಾನ್ ಟ್ರಕ್ಗಳ ವಿಶೇಷ ಪ್ರವೇಶಕ್ಕೆ ಭಾರತ ಅನುಮತಿ

PC: x.com/TimesAlgebraIND
ಹೊಸದಿಲ್ಲಿ: ಭಾರತದ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಎಸ್.ಜೈಶಂಕರ್ ಅವರು ಅಫ್ಘಾನ್ ನ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ಜತೆ ಮಾತುಕತೆ ನಡೆಸಿದ ಬೆನ್ನಲ್ಲೇ, ಭಾರತ ವಿಶೇಷ ಕ್ರಮವಾಗಿ ಅಟ್ಟಾರಿ ಗಡಿಯ ಮೂಲಕ ಒಣಹಣ್ಣು ಮತ್ತು ಬೀಜಗಳನ್ನು ಹೊತ್ತಿದ್ದ 160 ಟ್ರಕ್ ಗಳ ಪ್ರವೇಶಕ್ಕೆ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತವನ್ನು ಭಾರತ ಇದುವರೆಗೆ ಮಾನ್ಯ ಮಾಡದೇ ಇದ್ದರೂ, ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನದ ಜತೆ ರಾಜಕೀಯ ಸಂಪರ್ಕವನ್ನು ಸಾಧಿಸಿದೆ. ಶುಕ್ರವಾರ ಪಾಕಿಸ್ತಾನ ಅಟ್ಟಾರಿಯಲ್ಲಿ ಟ್ರಕ್ ಅನ್ಲೋಡ್ ಮಾಡುವುದಕ್ಕೆ ಅನುಮತಿ ನೀಡುವ ಮುನ್ನ ವಾಘ್ ಬದಿಯಲ್ಲಿ ಟ್ರಕ್ ಸಂಚಾರಕ್ಕೆ ಪರವಾನಗಿ ನೀಡುವುದನ್ನು ಅಲ್ಪಕಾಲ ತಡೆಹಿಡಿದಿತ್ತು.
ಪಹಲ್ಗಾಮ್ ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ಏಪ್ರಿಲ್ 23ರಂದು ದಾಳಿ ನಡೆಸಿದ ಬಳಿಕ ಭಾರತ ಅಟ್ಟಾರಿ-ವಾಘ್ ಗಡಿಯನ್ನು ಮುಚ್ಚಲು ನಿರ್ಧರಿಸಿತ್ತು. ಈ ಗಡಿಯ ಮೂಲಕ ಅಫ್ಘಾನಿಸ್ತಾನ ಮತ್ತು ಭಾರತದ ನಡುವೆ ಏಕಮುಖ ವಹಿವಾಟಿಗೆ ಪಾಕಿಸ್ತಾನ ಈ ಮೊದಲು ಅನುಮತಿ ನೀಡಿತ್ತು. ಅಫ್ಘಾನಿಸ್ತಾನದಿಂದ ಭಾರತಕ್ಕೆ ಸರಕು ರಫ್ತು ಮಾಡಲು ಅವಕಾಶವಿದ್ದು, ಭಾರತ ರಫ್ತು ಮಾಡಲು ಅವಕಾಶವಿಲ್ಲ.
ದಕ್ಷಿಣ ಏಷ್ಯಾದಲ್ಲಿ ಅಫ್ಘಾನ್ ಉತ್ಪನ್ನಗಳಿಗೆ ಭಾರತ ಅತಿದೊಡ್ಡ ಮಾರುಕಟ್ಟೆಯಾಗಿದೆ. ವಾರ್ಷಿಕ ಸುಮಾರು 100 ಕೋಟಿ ಡಾಲರ್ ಮೌಲ್ಯದ ಸರಕುಗಳನ್ನು ಭಾರತ ಅಫ್ಘಾನಿಸ್ತಾನದಿಂದ ಆಮದು ಮಾಡಿಕೊಳ್ಳುತ್ತಿದೆ.







