ಭಾರತ–ಯುರೋಪ್ ಒಕ್ಕೂಟ ನಡುವೆ ಶೀಘ್ರವೇ ಐತಿಹಾಸಿಕ ವ್ಯಾಪಾರ ಒಪ್ಪಂದ

Photo Credit : PTI
ದಾವೋಸ್, ಜ.20: ಭಾರತ ಹಾಗೂ ಯುರೋಪ್ ಒಕ್ಕೂಟ (EU) ನಡುವೆ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ ಶೀಘ್ರದಲ್ಲೇ ಅಂತಿಮಗೊಳ್ಳಲಿದ್ದು, ಇದು 200 ಕೋಟಿ ಜನರನ್ನು ಒಳಗೊಂಡ ಮಾರುಕಟ್ಟೆಯನ್ನು ಸೃಷ್ಟಿಸಲಿದೆ ಹಾಗೂ ಒಟ್ಟು ಜಾಗತಿಕ ಆಂತರಿಕ ಉತ್ಪನ್ನದ ಸುಮಾರು ಮೂರನೇ ಒಂದರಷ್ಟಾಗಲಿದೆ ಎಂದು ಯುರೋಪ್ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವೊನ್ ಡೆರ್ ಲಿಯೆನ್ ಮಂಗಳವಾರ ಹೇಳಿದ್ದಾರೆ.
ಅಮೆರಿಕವು ಯುರೋಪ್ ಒಕ್ಕೂಟ ಹಾಗೂ ಭಾರತದ ಮೇಲೆ ಸುಂಕದ ಒತ್ತಡ ಹೆಚ್ಚಿಸುತ್ತಿರುವ ಸಂದರ್ಭದಲ್ಲೇ ಈ ಒಪ್ಪಂದ ಸನ್ನಿಹಿತವಾಗಿರುವುದು ಗಮನಾರ್ಹವಾಗಿದೆ.
ದಾವೋಸ್ನಲ್ಲಿ ಮಂಗಳವಾರ ನಡೆದ ವಿಶ್ವ ಆರ್ಥಿಕ ವೇದಿಕೆ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ವೊನ್ ಡೆರ್ ಲಿಯೆನ್, ಯುರೋಪ್ ಒಕ್ಕೂಟವು ಈ ಶತಮಾನದ ಆರ್ಥಿಕ ಶಕ್ತಿಕೇಂದ್ರಗಳು ಹಾಗೂ ಪ್ರಗತಿಶೀಲ ದೇಶಗಳೊಂದಿಗೆ ವಾಣಿಜ್ಯ ವ್ಯವಹಾರಗಳನ್ನು ವಿಸ್ತರಿಸಲು ಬಯಸುತ್ತದೆ ಎಂದು ಹೇಳಿದರು.
“ನಾನು ಭಾರತಕ್ಕೆ ಪ್ರಯಾಣಿಸಲಿದ್ದೇನೆ. ನಾವು ಐತಿಹಾಸಿಕ ವ್ಯಾಪಾರ ಒಪ್ಪಂದದ ಹೊಸ್ತಿಲಲ್ಲಿದ್ದೇವೆ. ಕೆಲವರು ಇದನ್ನು ‘ಎಲ್ಲಾ ಒಪ್ಪಂದಗಳ ತಾಯಿ’ ಎಂದು ಕರೆಯುತ್ತಿದ್ದಾರೆ. ಇದು 200 ಕೋಟಿ ಜನರನ್ನು ಒಳಗೊಂಡ ಮಾರುಕಟ್ಟೆಯನ್ನು ಸೃಷ್ಟಿಸಲಿದೆ,” ಎಂದು ಅವರು ಹೇಳಿದರು.
► ಜ.25–27ರಂದು ಇಯು ವರಿಷ್ಠರ ಭಾರತ ಭೇಟಿ
ಯುರೋಪ್ ಮಂಡಳಿಯ ಅಧ್ಯಕ್ಷ ಆ್ಯಂಟೊನಿಯೊ ಕೋಸ್ಟಾ ಹಾಗೂ ಯುರೋಪ್ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವೊನ್ ಡೆರ್ ಲಿಯೆನ್ ಅವರು ಜನವರಿ 25ರಿಂದ 27ರವರೆಗೆ ಮೂರು ದಿನಗಳ ಭಾರತ ಪ್ರವಾಸ ಕೈಗೊಳ್ಳಲಿದ್ದು, ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಶೃಂಗಸಭೆ ನಡೆಸಲಿದ್ದಾರೆ.







