PoKಯಲ್ಲಿ ಪಾಕಿಸ್ತಾನದ ಕ್ರಮಗಳ ಕುರಿತು ವರದಿ ಬಿಡುಗಡೆಗೆ ಭಾರತ ಒತ್ತಾಯ
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿಗೆ ಮನವಿ

ಅನುಜ್ ಸ್ವರೂಪ್ | PhotoCredit : NDTV
ವಿಶ್ವಸಂಸ್ಥೆ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ನಡೆದಿರುವ ಹತ್ಯೆಗಳ ತನಿಖೆ, ಅಂತರ್ಜಾಲ ನಿರ್ಬಂಧಗಳು ಹಾಗೂ ಮಾನವ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಕೈಗೊಂಡಿರುವ ಕ್ರಮಗಳ ಕುರಿತು ವರದಿ ಬಿಡುಗಡೆ ಮಾಡುವಂತೆ ಭಾರತವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿಯನ್ನು ಒತ್ತಾಯಿಸಿದೆ.
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮೂರನೇ ಸಮಿತಿಯ 81ನೇ ಅಧಿವೇಶನದಲ್ಲಿ ಬುಧವಾರ ಮಾನವ ಹಕ್ಕುಗಳ ಹೈಕಮಿಷನರ್ ವೋಲ್ಕರ್ ಟರ್ಕ್ ಅವರೊಂದಿಗೆ ನಡೆದ ಸಂವಾದದ ವೇಳೆ ಭಾರತದ ಖಾಯಂ ನಿಯೋಗದ ಪ್ರಥಮ ಕಾರ್ಯದರ್ಶಿ ಅನುಜ್ ಸ್ವರೂಪ್ ಭಾರತದ ನಿಲುವನ್ನು ಮಂಡಿಸಿದರು.
PoKಯಲ್ಲಿ ಸಶಸ್ತ್ರ ಪಡೆಗಳು ಹಾಗೂ ಭದ್ರತಾ ಪಡೆಗಳಿಂದ ನಡೆದಿರುವ ಹತ್ಯೆಗಳ ಕುರಿತು ಪ್ರಾಮಾಣಿಕ, ಸೂಕ್ತ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿ ಆಗ್ರಹಿಸಿರುವುದನ್ನು ಅವರು ಉಲ್ಲೇಖಿಸಿದರು.
ಭದ್ರತಾ ಪಡೆಗಳಿಂದ ಬಂಧನಕ್ಕೊಳಗಾಗಿರುವ ಜಾಯಿಂಟ್ ಅವಾಮಿ ಆ್ಯಕ್ಷನ್ ಕಮಿಟಿಯ ನಾಯಕರು ಹಾಗೂ ಅವರ ಕುಟುಂಬದ ಸದಸ್ಯರಿಗೆ ಕಾನೂನು ನೆರವು ಪಡೆಯಲು ಅವಕಾಶ ಕಲ್ಪಿಸಬೇಕು. ಅವರಿಗೆ ಸೂಕ್ತ ಕಾನೂನು ಪ್ರಕ್ರಿಯೆ ಮತ್ತು ನ್ಯಾಯಯುತ ವಿಚಾರಣೆಯ ಖಾತರಿ ನೀಡಬೇಕು ಎಂದೂ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘಟಕ ಒತ್ತಾಯಿಸಿತ್ತು.
PoKಯಾದ್ಯಂತ ವಿಧಿಸಿರುವ ಅಂತರ್ಜಾಲ ನಿರ್ಬಂಧಗಳನ್ನು ತೆರವುಗೊಳಿಸಬೇಕು ಹಾಗೂ ಸ್ಥಳೀಯ ಜನರ ಕುಂದುಕೊರತೆಗಳನ್ನು ಆಲಿಸಲು ಅರ್ಥಪೂರ್ಣ ರಾಜಕೀಯ ಸಂವಾದ ನಡೆಸಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿತ್ತು.
‘ಈ ವಿಷಯದಲ್ಲಿ ಪಾಕಿಸ್ತಾನ ಸರಕಾರ ಕೈಗೊಂಡಿರುವ ಕ್ರಮಗಳ ಕುರಿತು ಮಾನವ ಹಕ್ಕುಗಳ ಹೈಕಮಿಷನರ್ ವರದಿಯನ್ನು ಯಾವಾಗ ಬಿಡುಗಡೆ ಮಾಡಬಹುದು ಎಂಬುದನ್ನು ತಿಳಿಯಲು ನಾವು ಬಯಸುತ್ತೇವೆ. ಖೈಬರ್ ಪಖ್ತುಂಖ್ವಾ ಸೇರಿದಂತೆ ಪಾಕಿಸ್ತಾನದ ಹಲವು ಭಾಗಗಳಲ್ಲಿ ಜನರಿಗೆ ಇಂತಹ ಹಕ್ಕುಗಳು ಲಭ್ಯವಾಗುತ್ತಿಲ್ಲ ಎಂಬುದನ್ನು ಪಾಕಿಸ್ತಾನ ಗಮನಿಸಬಹುದು. ಅಕ್ರಮ ಅತಿಕ್ರಮಣದಲ್ಲಿರುವ ರಾವಲಕೋಟ್ ನಲ್ಲಿಯೂ ಇದೇ ಕ್ರಮ ಕೈಗೊಳ್ಳಬಹುದು’ ಎಂದು ಅನುಜ್ ಸ್ವರೂಪ್ ಹೇಳಿದರು.
ಜುಲೈ ಅಂತ್ಯದಲ್ಲಿ ನಡೆಯಲಿದ್ದ ಪ್ರಾಂತೀಯ ಚುನಾವಣೆಗಳಿಗೆ ಮುನ್ನ PoKಯಲ್ಲಿ ಭುಗಿಲೆದ್ದಿದ್ದ ಅಶಾಂತಿಯನ್ನು ಶಮನಗೊಳಿಸುವಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ವೋಲ್ಕರ್ ಟರ್ಕ್ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, PoKಯಲ್ಲಿನ ಪರಿಸ್ಥಿತಿಯ ಕುರಿತು ಪಾಕಿಸ್ತಾನ ಕೈಗೊಂಡಿರುವ ಕ್ರಮಗಳ ಬಗ್ಗೆ ವರದಿ ಬಿಡುಗಡೆ ಮಾಡುವಂತೆ ಭಾರತವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಘಟಕಕ್ಕೆ ಮನವಿ ಮಾಡಿದೆ.






