ರಶ್ಯದ ತೈಲದಿಂದ ಭಾರತ ರಾತ್ರೋರಾತ್ರಿ ದೂರ ಸರಿಯಲು ಸಾಧ್ಯವಿಲ್ಲ: ರೂಬಿಯೊ

ಮಾರ್ಕೊ ರೂಬಿಯೊ | Photo Credit : AP , PTI
ವಾಶಿಂಗ್ಟನ್, ಅ.18: ರಶ್ಯದ ಮೇಲೆ ನಿರ್ಬಂಧಗಳನ್ನು ವಿಧಿಸುವುದು ಮತ್ತು ರಶ್ಯದ ತೈಲ ಖರೀದಿಸುವ ದೇಶಗಳ ಮೇಲೆ ಸುಂಕಗಳನ್ನು ವಿಧಿಸುವುದರಿಂದ ಉಂಟಾಗುವ ಆರ್ಥಿಕ ಪರಿಣಾಮಗಳನ್ನು ಮೌಲ್ಯಮಾಪನ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 60 ದಿನಗಳ ಅವಧಿಯನ್ನು ಬಳಸಿಕೊಳ್ಳಲು ಬಯಸಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ತಿಳಿಸಿದ್ದಾರೆ.
ಭಾರತದಂತಹ ದೇಶಗಳು ತಮ್ಮ ಇಂಧನ ಮೂಲಗಳನ್ನು ಸ್ವಯಂಪ್ರೇರಿತವಾಗಿ ವೈವಿಧ್ಯಗೊಳಿಸಿದ್ದರೂ, ಇನ್ನೂ ಹೆಚ್ಚಿನ ಪ್ರಮಾಣದ ಇಂಧನವನ್ನು ರಶ್ಯದಿಂದ ಪಡೆಯುತ್ತಿವೆ. ಒಂದೇ ದಿನದಲ್ಲಿ ಇಷ್ಟೊಂದು ದೊಡ್ಡ ಬದಲಾವಣೆ ಮಾಡಿಕೊಳ್ಳುವುದು ಕಷ್ಟ. ಪ್ರಸ್ತಾವಿತ ಆರ್ಥಿಕ ಕ್ರಮಗಳು ಜಾಗತಿಕ ಆರ್ಥಿಕತೆ ಮತ್ತು ಅಮೆರಿಕದ ಮೇಲೆ ಉಂಟುಮಾಡಬಹುದಾದ ಪರಿಣಾಮಗಳನ್ನು ಮೌಲ್ಯಮಾಪನ ಮಾಡುವ ಅಗತ್ಯ ಆಡಳಿತಕ್ಕಿದೆ ಎಂದು ರೂಬಿಯೊ ಹೇಳಿದ್ದಾರೆ.
‘ರಶ್ಯ ಮತ್ತು ಇರಾನ್ ಮೇಲಿನ ನಿರ್ಬಂಧಗಳ ಕಾಯ್ದೆ’ಯ ಪ್ರಮುಖ ನಿಬಂಧನೆಗಳನ್ನು, ಅಂದರೆ ಭಾರತಕ್ಕೆ ಬೆದರಿಕೆಯಾಗಿದ್ದ ಶಿಕ್ಷಾರ್ಹ ಕ್ರಮಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವ ಟ್ರಂಪ್ ಅವರ ನಿರ್ಧಾರವನ್ನು ರೂಬಿಯೊ ಈ ರೀತಿ ವಿವರಿಸಿದ್ದಾರೆ.




