ಅಮೆರಿಕದಲ್ಲಿ ರಶ್ಯ ವಿರುದ್ಧ ದಿಗ್ಬಂಧನ ಹೇರುವ ಮಸೂದೆ: ಭಾರತಕ್ಕೆ ತಲೆನೋವು

ಲಿಂಡ್ಸೆ ಗ್ರಹಾಂ (Photo: X/@LindseyGrahamSC)
ವಾಷಿಂಗ್ಟನ್: ರಶ್ಯಾದ ಮೇಲೆ ಆರ್ಥಿಕ ದಿಗ್ಬಂಧನ ವಿಧಿಸುವ ಮಸೂದೆಯನ್ನು ಅಂಗೀಕರಿಸುವಂತೆ ಅಮೆರಿಕ ಸೆನೆಟ್ನ ಪ್ರಭಾವಿ ಸದಸ್ಯ ಲಿಂಡ್ಸೆ ಗ್ರಹಾಂ ಬಹಿರಂಗವಾಗಿ ಕರೆ ನೀಡಿದ್ದು, ಭಾರತದ ಪಾಲಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಈ ಮಸೂದೆಯ ಪ್ರಕಾರ, ಮಾಸ್ಕೋ ಜತೆ ವಹಿವಾಟು ನಡೆಸುವ ದೇಶಗಳು ಕೂಡಾ ನಿರ್ಬಂಧಕ್ಕೆ ಗುರಿಯಾಗಲಿವೆ.
"ರಶ್ಯ ನಿರ್ಬಂಧ ಮಸೂದೆಗೆ 84 ಮಂದಿ ಸಹ ಪ್ರಾಯೋಜಕರಿದ್ದಾರೆ. ಉಕ್ರೇನ್ ಮೇಲಿನ ಕ್ರೂರ ರಶ್ಯನ್ ದಾಳಿಯ ವಿರುದ್ಧದ ಈ ಮಸೂದೆ ಚೀನಾ, ಭಾರತ ಹಾಗೂ ರಶ್ಯ ಪಾಲಿಗೆ ಬಂಕರ್ ಬಸ್ಟರ್ ಎನಿಸಲಿದೆ" ಎಂದು ಅವರು ಬಣ್ಣಿಸಿದ್ದಾರೆ. ಈ ಮಸೂದೆ ಅನುಮೋದನೆಯಾಗಲಿದೆ ಎಂಬ ವಿಶ್ವಾಸವನ್ನು ಗ್ರಹಾಂ ಟಿವಿ ಸಂದರ್ಶನದಲ್ಲಿ ವ್ಯಕ್ತಪಡಿಸಿದ್ದಾರೆ.
ಈ ವರ್ಷದ ಎಪ್ರಿಲ್ನಲ್ಲಿ ಅಮೆರಿಕದ ಸೆನೆಟ್ ಸದಸ್ಯ, 'ಸ್ಯಾಂಕ್ಷನಿಂಗ್ ರಶ್ಯ ಆ್ಯಕ್ಟ್ ಆಫ್ 2025' ಮಂಡಿಸಿದ್ದರು. ರಷ್ಯಾ ಮೂಲದ ತೈಲ, ನೈಸರ್ಗಿಕ ಅನಿಲ, ಯುರೇನಿಯಂ ಮತ್ತು ಪೆಟ್ರೋಲಿಯಂ ಉತ್ಪನ್ನಗಳನ್ನು ರಷ್ಯಾದಿಂದ ಖರೀದಿಸುವ ಎಲ್ಲ ದೇಶಗಳ ಸರಕು ಮತ್ತು ಸೇವೆಗಳ ರಫ್ತಿನ ಮೇಲೆ ದೊಡ್ಡ ಪ್ರಮಾಣದಲ್ಲಿ ಸುಂಕ ವಿಧಿಸಲು ಈ ಮಸೂದೆ ಪ್ರಸ್ತಾವಿಸಿದೆ. ರಷ್ಯನ್ ವ್ಯವಹಾರ, ಸರ್ಕಾರಿ ಸಂಸ್ಥೆಗಳು ಮತ್ತು ನೀತಿ ನಿರೂಪಕರ ಮೇಲೆ ನಿರ್ಬಂಧ ವಿಸ್ತರಿಸುವ ಪ್ರಸ್ತಾವವನ್ನೂ ಮಸೂದೆ ಮುಂದಿಟ್ಟಿದೆ.
ರಶ್ಯಾದಿಂದ ಅತಿಹೆಚ್ಚು ತೈಲ ಖರೀದಿಸುವ ದೇಶಗಳ ಪೈಕಿ ಭಾರತ ಎರಡನೇ ಸ್ಥಾನದಲ್ಲಿದ್ದು, ಭಾರತ ಮೇ ತಿಂಗಳಲ್ಲಿ ರಶ್ಯಾದಿಂದ ಸುಮಾರು 4.2 ಶತಕೋಟಿ ಪೌಂಡ್ ಮೌಲ್ಯದ ತೈಲ ಖರೀದಿಸಿದೆ. ಇದರಲ್ಲಿ ಶೇಕಡ 72ರಷ್ಟು ಕಚ್ಚಾತೈಲ. ಹೊಸ ಮಸೂದೆ ಆಂಗೀಕಾರಗೊಂಡಲ್ಲಿ ಭಾರತದ ಪಾಲಿಗೆ ಮಾರಕವಾಗಲಿದೆ ಎಂದು ವರದಿಯಾಗಿದೆ.







