BRICS ಶೃಂಗಸಭೆ | ಮೋದಿ–ಕ್ಸಿ ಜಿನ್ಪಿಂಗ್ ಭೇಟಿ: ಗಡಿ ವಿಚಾರದಲ್ಲಿ ಭಾರತ–ಚೀನಾ ನಡುವೆ ಇನ್ನೂ ಭಿನ್ನಮತ
ಗಡಿಯಲ್ಲಿ ಶಾಂತಿ, ಒಪ್ಪಂದಗಳ ಪಾಲನೆಗೆ ಭಾರತ ಒತ್ತು; ಗಡಿ ಸಮಸ್ಯೆ ಜತೆಗೆ ದ್ವಿಪಕ್ಷೀಯ ಸಂಬಂಧ ಸುಧಾರಣೆಗೂ ಚೀನಾ ಆದ್ಯತೆ

ನರೇಂದ್ರ ಮೋದಿ , ಜಿನ್ಪಿಂಗ್ | Photo Credit : PTI
ಹೊಸದಿಲ್ಲಿ, ಸೆ.13: ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಶನಿವಾರ ಭೇಟಿಯಾದ ಬಳಿಕ ಭಾರತ ಹಾಗೂ ಚೀನಾ ಬಿಡುಗಡೆ ಮಾಡಿರುವ ಹೇಳಿಕೆಗಳಲ್ಲಿ ಗಡಿ ಸಮಸ್ಯೆ ಮತ್ತು ಒಟ್ಟಾರೆ ದ್ವಿಪಕ್ಷೀಯ ಸಂಬಂಧದ ನಡುವಿನ ಸಂಬಂಧದ ಕುರಿತು ಉಭಯ ದೇಶಗಳ ನಿಲುವಿನಲ್ಲಿನ ವ್ಯತ್ಯಾಸ ಸ್ಪಷ್ಟವಾಗಿದೆ.
ದಿಲ್ಲಿಯಲ್ಲಿ ನಡೆದ ಬ್ರಿಕ್ಸ್ (BRICS) ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಹಾಗೂ ಷಿ ಭೇಟಿಯಾಗಿದ್ದರು. 2020ರ ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಉಂಟಾದ ಗಡಿ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಸುಮಾರು ಏಳು ವರ್ಷಗಳ ಬಳಿಕ ಕ್ಸಿ ಜಿನ್ಪಿಂಗ್ ಭಾರತಕ್ಕೆ ಭೇಟಿ ನೀಡಿರುವುದು ಮಹತ್ವ ಪಡೆದಿದೆ.
2020ರ ಗಲ್ವಾನ್ ಸಂಘರ್ಷದಲ್ಲಿ 20 ಭಾರತೀಯ ಸೈನಿಕರು ಹಾಗೂ ನಾಲ್ವರು ಚೀನೀ ಸೇನಾ ಸಿಬ್ಬಂದಿ ಮೃತಪಟ್ಟಿದ್ದರು. ಸಂಘರ್ಷದ ಬಳಿಕ ಭಾರತ–ಚೀನಾ ಸಂಬಂಧದಲ್ಲಿ ತೀವ್ರ ಹಿನ್ನಡೆ ಉಂಟಾಗಿತ್ತು.
ಚೀನಾದ ಹೇಳಿಕೆಯಲ್ಲಿ, ದ್ವಿಪಕ್ಷೀಯ ಸಂಬಂಧಗಳನ್ನು ಮುಂದುವರಿಸುವುದರ ಜತೆಗೆ ಗಡಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಬೇಕು ಎಂದು ಎರಡೂ ದೇಶಗಳಿಗೆ ಕರೆ ನೀಡಲಾಗಿದೆ. ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಿಕೊಳ್ಳುತ್ತಲೇ, ದ್ವಿಪಕ್ಷೀಯ ಸಂಬಂಧ ಹಾಗೂ ಗಡಿ ಸಮಸ್ಯೆ—ಎರಡೂ ಕ್ಷೇತ್ರಗಳಲ್ಲಿ ‘ಸಮಾನಾಂತರ ಹಾಗೂ ಪರಸ್ಪರ ಪೂರಕವಾದ ಪ್ರಗತಿ’ ಸಾಧಿಸಲು ಪ್ರಯತ್ನಿಸಬೇಕು ಎಂದು ಚೀನಾ ಹೇಳಿದೆ.
‘ಎರಡೂ ಕಡೆಯವರು ದ್ವಿಪಕ್ಷೀಯ ಸಂಬಂಧಗಳನ್ನು ಮುನ್ನಡೆಸಲು ಮತ್ತು ಗಡಿ ಸಮಸ್ಯೆಯನ್ನು ಬಗೆಹರಿಸಲು ಬದ್ಧರಾಗಬೇಕು. ಸಮಾನಾಂತರ ಹಾಗೂ ಪರಸ್ಪರ ಪೂರಕವಾದ ಪ್ರಗತಿ ಸಾಧಿಸಲು ಪ್ರಯತ್ನಿಸಬೇಕು ಮತ್ತು ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಿಕೊಳ್ಳಬೇಕು’ ಎಂದು ಚೀನಾದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಗಡಿ ಶಾಂತಿಗೆ ಭಾರತದ ಒತ್ತು :
ಭಾರತದ ಹೇಳಿಕೆಯಲ್ಲಿ ಗಡಿ ಪರಿಸ್ಥಿತಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಗಡಿ ಪ್ರದೇಶಗಳಲ್ಲಿ ಶಾಂತಿ ‘ದ್ವಿಪಕ್ಷೀಯ ಸಂಬಂಧಗಳ ನಿರಂತರ ಅಭಿವೃದ್ಧಿಗೆ ಅತ್ಯಗತ್ಯ ಆಧಾರ’ ಎಂದು ಪ್ರಧಾನಿ ಮೋದಿ ಒತ್ತಿಹೇಳಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಗಡಿ ಸಂಬಂಧಿತ ವಿಷಯಗಳ ಕುರಿತು ಈಗಾಗಲೇ ಜಾರಿಯಲ್ಲಿರುವ ಒಪ್ಪಂದಗಳು ಮತ್ತು ತಿಳುವಳಿಕೆಗಳನ್ನು ಎರಡೂ ದೇಶಗಳು ಪಾಲಿಸಬೇಕಾದ ಅಗತ್ಯವನ್ನೂ ಮೋದಿ ಒತ್ತಿ ಹೇಳಿದ್ದಾರೆ.
ಎರಡೂ ದೇಶಗಳ ಜನರ ದೀರ್ಘಕಾಲೀನ ಹಿತಾಸಕ್ತಿಗಳು ಹಾಗೂ ಒಟ್ಟಾರೆ ದ್ವಿಪಕ್ಷೀಯ ಸಂಬಂಧವನ್ನು ಗಮನದಲ್ಲಿಟ್ಟುಕೊಂಡು, ಗಡಿ ಸಮಸ್ಯೆಗೆ ‘ನ್ಯಾಯಯುತ, ಸಮಂಜಸ ಮತ್ತು ಪರಸ್ಪರ ಸ್ವೀಕಾರಾರ್ಹ’ ಪರಿಹಾರ ಕಂಡುಕೊಳ್ಳುವ ಬದ್ಧತೆಯನ್ನು ಮೋದಿ ಮತ್ತು ಕ್ಸಿ ಜಿನ್ಪಿಂಗ್ ವ್ಯಕ್ತಪಡಿಸಿದ್ದಾರೆ ಎಂದು ಭಾರತದ ಹೇಳಿಕೆ ತಿಳಿಸಿದೆ.
ಆದ್ಯತೆಯಲ್ಲಿ ವ್ಯತ್ಯಾಸ :
ಗಡಿ ಸಮಸ್ಯೆ ಹಾಗೂ ದ್ವಿಪಕ್ಷೀಯ ಸಂಬಂಧಗಳ ಪ್ರಗತಿಗೆ ಯಾವ ರೀತಿಯಲ್ಲಿ ಆದ್ಯತೆ ನೀಡಬೇಕು ಎಂಬುದೇ ಉಭಯ ದೇಶಗಳ ಹೇಳಿಕೆಗಳ ನಡುವಿನ ಪ್ರಮುಖ ವ್ಯತ್ಯಾಸವಾಗಿದೆ.
ಚೀನಾದ ನಿಲುವಿನ ಪ್ರಕಾರ, ಗಡಿ ಸಮಸ್ಯೆ ಬಗೆಹರಿಯದೆ ಉಳಿದಿದ್ದರೂ ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಗತಿ ಸಾಧಿಸಬಹುದು. ಗಡಿ ಸಮಸ್ಯೆ ಪರಿಹರಿಸುವ ಪ್ರಯತ್ನದ ಜತೆಗೆ ದ್ವಿಪಕ್ಷೀಯ ಸಂಬಂಧಗಳನ್ನೂ ಮುಂದುವರಿಸಬೇಕು ಎಂಬುದು ಚೀನಾದ ನಿಲುವಾಗಿದೆ.
ಆದರೆ ಭಾರತದ ನಿಲುವಿನ ಪ್ರಕಾರ, ಗಡಿ ಪ್ರದೇಶಗಳಲ್ಲಿ ಶಾಂತಿ ನೆಲೆಸುವುದು ಹಾಗೂ ಅಸ್ತಿತ್ವದಲ್ಲಿರುವ ಒಪ್ಪಂದಗಳು ಮತ್ತು ತಿಳುವಳಿಕೆಗಳನ್ನು ಪಾಲಿಸುವುದೇ ದ್ವಿಪಕ್ಷೀಯ ಸಂಬಂಧಗಳ ನಿರಂತರ ಅಭಿವೃದ್ಧಿಗೆ ಆಧಾರ.
2020ರ ಗಲ್ವಾನ್ ಸಂಘರ್ಷದ ಬಳಿಕ ಈ ವ್ಯತ್ಯಾಸಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಸಂಘರ್ಷವು ಭಾರತ–ಚೀನಾ ಸಂಬಂಧಗಳಿಗೆ ತೀವ್ರ ಹಾನಿ ಉಂಟುಮಾಡಿತ್ತು. ಅಂದಿನಿಂದ ಗಡಿಯಲ್ಲಿನ ಪರಿಸ್ಥಿತಿಯನ್ನು ಒಟ್ಟಾರೆ ದ್ವಿಪಕ್ಷೀಯ ಸಂಬಂಧದ ಸ್ಥಿತಿಯಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂಬ ನಿಲುವನ್ನು ಭಾರತ ಕಾಯ್ದುಕೊಂಡಿದೆ.
ಇದಕ್ಕೆ ವಿರುದ್ಧವಾಗಿ, ಗಡಿ ಸಮಸ್ಯೆ ಇನ್ನೂ ಬಗೆಹರಿಯದಿದ್ದರೂ ದ್ವಿಪಕ್ಷೀಯ ಸಂಬಂಧಗಳಲ್ಲಿ ಪ್ರಗತಿ ಸಾಧಿಸಲು ಅವಕಾಶವಿರಬೇಕು ಎಂಬ ನಿಲುವನ್ನು ಚೀನಾ ಇತ್ತೀಚಿನ ಹೇಳಿಕೆಯಲ್ಲೂ ವ್ಯಕ್ತಪಡಿಸಿದೆ.
ಹೀಗಾಗಿ, ಮೋದಿ–ಕ್ಸಿ ಜಿನ್ಪಿಂಗ್ ಭೇಟಿಯ ಬಳಿಕ ಉಭಯ ದೇಶಗಳು ದ್ವಿಪಕ್ಷೀಯ ಸಂಬಂಧ ಸುಧಾರಣೆ ಹಾಗೂ ಗಡಿ ಸಮಸ್ಯೆ ಪರಿಹಾರದ ಅಗತ್ಯವನ್ನು ಒಪ್ಪಿಕೊಂಡಿದ್ದರೂ, ಗಡಿ ಪರಿಸ್ಥಿತಿ ಮತ್ತು ದ್ವಿಪಕ್ಷೀಯ ಸಂಬಂಧಗಳ ನಡುವಿನ ಆದ್ಯತೆ ಹಾಗೂ ಪ್ರಗತಿಯ ಕ್ರಮದ ಕುರಿತು ಎರಡೂ ದೇಶಗಳ ನಿಲುವು ವಿಭಿನ್ನವಾಗಿಯೇ ಉಳಿದಿದೆ.






