ರಷ್ಯಾದ ತೈಲ ಖರೀದಿಗೆ ಭಾರತಕ್ಕೆ ಅನುಮತಿ ಬೇಕಿಲ್ಲ: ಅಮೆರಿಕಕ್ಕೆ ತಿರುಗೇಟು

ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ: ಅಮೆರಿಕ ಮತ್ತು ಭಾರತ ನಡುವಿನ ಪ್ರಸ್ತಾವಿತ ವ್ಯಾಪಾರ ಒಪ್ಪಂದ ಚೌಕಟ್ಟಿನಡಿ, ರಷ್ಯಾದಿಂದ ಕಚ್ಚಾತೈಲ ಖರೀದಿಸುವುದನ್ನು ಸ್ಥಗಿತಗೊಳಿವುದಾಗಿ ಭಾರತ ಭರವಸೆ ನೀಡಿದೆ ಎಂಬ ಹೇಳಿಕೆ ನೀಡಿ ಡೊನಾಲ್ಡ್ ಟ್ರಂಪ್ ಅವರು ಶೇ.25ರಷ್ಟು ತೆರಿಗೆಯನ್ನು ರದ್ದುಪಡಿಸಿದ ಬಳಿಕವೂ ರಷ್ಯಾದಿಂದ ಕಚ್ಚಾತೈಲ ಖರೀದಿಯನ್ನು ಭಾರತ ಎಂದೂ ಸ್ಥಗಿತಗೊಳಿಸಿಲ್ಲ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.
ರಷ್ಯಾದಿಂದ ತೈಲ ಖರೀದಿಗೆ ಭಾರತಕ್ಕೆ ಯಾವ ದೇಶದ ಅನುಮತಿಯೂ ಬೇಕಿಲ್ಲ ಎಂದು ಮೂಲಗಳು ಹೇಳಿವೆ. ಫೆಬ್ರವರಿಯಲ್ಲಿ ಕೂಡಾ ಭಾರತಕ್ಕೆ ಅತ್ಯಧಿಕ ತೈಲ ಪೂರೈಕೆ ಮಾಡುವ ದೇಶವಾಗಿ ರಷ್ಯಾ ಮುಂದುವರಿದಿದೆ ಎಂದು ಹೇಳಲಾಗಿದೆ.
ಭಾರತದ ತೈಲ ಖರೀದಿ ನಿರ್ಧಾರಗಳು ರಾಷ್ಟ್ರೀಯ ಹಿತಾಸಕ್ತಿಯ ತತ್ವದಿಂದ ನಿರ್ದೇಶಿತವಾಗಿವೆ. ಎಲ್ಲಿ ಸ್ಪರ್ಧಾತ್ಮಕ ಬೆಲೆಗೆ ಮತ್ತು ಸರಬರಾಜು ಲಭ್ಯವಿರುತ್ತದೆಯೋ ಅಲ್ಲಿಂದ ಖರೀದಿಸುತ್ತೇವೆ. ಅದನ್ನು ನಾವು ಮುಂದುವರಿಸಲಿದ್ದೇವೆ" ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಭಾರತ ರಷ್ಯಾದಿಂದ ತೈಲ ಖರೀದಿಸುವುದಕ್ಕಾಗಿ ವಿಧಿಸಿದ್ದ ಸುಂಕವನ್ನು 30 ದಿನಗಳವರೆಗೆ ಮನ್ನಾ ಮಾಡಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ನೀಡಿದ ಹೇಳಿಕೆ ಬಗ್ಗೆ ಗಮನ ಸೆಳೆದಾಗ, ಅದು ಅವರ ದೇಶಿಯ ಪ್ರೇಕ್ಷಕರಿಗೆ ನೀಡಿದ ಹೇಳಿಕೆ ಎಂದು ಉನ್ನತ ಅಧಿಕಾರಿ ಪ್ರತಿಕ್ರಿಯಿಸಿದರು. ಇದು ನಮ್ಮ ಸ್ಥಿರವಾದ ನಿಲುವು ಎಂದು ಸ್ಪಷ್ಟಪಡಿಸಿದರು.
ಭಾರತ ಪೆಟ್ರೋಲಿಯಂ ಕ್ಷೇತ್ರದಲ್ಲಿ ಕೈಗೊಳ್ಳುವ ಪ್ರತಿಯೊಂದು ನಿರ್ಧಾರವೂ ಮೂರು ತತ್ವಗಳಿಂದ ನಿರ್ದೇಶಿಸಲ್ಪಟ್ಟಿರುತ್ತವೆ: ಅವುಗಳೆಂದರೆ, ಕೈಗೆಟುಕುವ ಬೆಲೆ, ಲಭ್ಯತೆ ಮತ್ತು ಸುಸ್ಥಿರತೆ ಎಂದು ಹೇಳಿದರು.
ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಗುರುವಾರ ಹೇಳಿಕೆ ನೀಡಿ, ಮಧ್ಯಪ್ರಾಚ್ಯ ಬಿಕ್ಕಟ್ಟು ಹಾಗೂ ಇರಾನ್ ಹೊರ್ಮುಜ್ ಸಂಧಿಯನ್ನು ತಡೆದಿರುವ ಹಿನ್ನೆಲೆಯಲ್ಲಿ ಭಾರತ ರಷ್ಯಾದಿಂದ ತೈಲ ಖರೀದಿಸುವುದಕ್ಕೆ 30 ದಿನಗಳ ಕಾಲ ಸುಂಕ ಮನ್ನಾ ಮಾಡಲು ಅಮೆರಿಕ ನಿರ್ಧರಿಸಿದೆ ಎಂದು ಪ್ರಕಟಿಸಿದ್ದರು.







