ಪಾಕಿಸ್ತಾನವನ್ನು ಮತ್ತೆ 'ಬೂದು ಪಟ್ಟಿಗೆ' ಸೇರಿಸಲು ಒತ್ತಡ ಹೇರಲಿರುವ ಭಾರತ: ವರದಿ

ವಿಶ್ವಸಂಸ್ಥೆ, ಜೂ.30: ಅಕ್ಟೋಬರ್‌ನಲ್ಲಿ ನಡೆಯಲಿರುವ FATF ಪೂರ್ಣಪ್ರಮಾಣದ ಸಭೆಯಲ್ಲಿ ಪಾಕಿಸ್ತಾನವನ್ನು ಮತ್ತೆ ಬೂದು ಪಟ್ಟಿಗೆ ಸೇರಿಸುವಂತೆ ಭಾರತವು ಒತ್ತಾಯಿಸುವ ಸಾಧ್ಯತೆಯಿದೆ. ಭಯೋತ್ಪಾದಕ ಸಂಸ್ಥೆಗಳಿಗೆ ಪಾಕಿಸ್ತಾನ ನಿರಂತರ ಬೆಂಬಲ ನೀಡುತ್ತಿರುವುದನ್ನು ಸೂಚಿಸುವ ಪುರಾವೆಗಳನ್ನು ಉಲ್ಲೇಖಿಸಿ ಭಾರತ ಈ ಕ್ರಮಕ್ಕೆ ಮುಂದಾಗಿದೆ ಎಂದು the times of India ವರದಿ ಮಾಡಿದೆ.
ಪಾಕಿಸ್ತಾನವು 2018ರಿಂದ FATFನ ಬೂದು ಪಟ್ಟಿಯಲ್ಲಿ ಇತ್ತು. ಆದರೆ, 2022ರಲ್ಲಿ ಅದನ್ನು ಪಟ್ಟಿಯಿಂದ ತೆಗೆದುಹಾಕಲಾಯಿತು. ವರದಿಯ ಪ್ರಕಾರ, ಪಾಕಿಸ್ತಾನವನ್ನು ಮತ್ತೆ FATFನ ಸುಧಾರಿತ ಉಸ್ತುವಾರಿ ಕಾರ್ಯವಿಧಾನದ ಅಡಿಗೆ ತರುವುದು ಈ ಕ್ರಮದ ಉದ್ದೇಶವಾಗಿದೆ.
ಅಕ್ರಮ ಹಣ ವರ್ಗಾವಣೆ, ಭಯೋತ್ಪಾದನೆಗೆ ಧನಸಹಾಯ ಮತ್ತು ಸಾಮೂಹಿಕ ವಿನಾಶದ ಆಯುಧಗಳ ಪ್ರಸರಣಕ್ಕೆ ಧನಸಹಾಯವನ್ನು ತಡೆಗಟ್ಟುವ ತಮ್ಮ ವ್ಯವಸ್ಥೆಯಲ್ಲಿನ ಕಾರ್ಯತಂತ್ರದ ಕೊರತೆಗಳನ್ನು ನಿವಾರಿಸಲು ಬೂದು ಪಟ್ಟಿಯಲ್ಲಿರುವ ದೇಶಗಳನ್ನು FATFನ ಹೆಚ್ಚುವರಿ ಉಸ್ತುವಾರಿ ಮತ್ತು ನಿಯತಕಾಲಿಕ ಪರಿಶೀಲನೆಗೆ ಒಳಪಡಿಸಲಾಗುತ್ತದೆ. ಇಂತಹ ದೇಶಗಳು ಜಾಗತಿಕ ಹಣಕಾಸು ಸಂಸ್ಥೆಗಳಿಂದ ಹಣವನ್ನು ಪಡೆಯುವಲ್ಲಿಯೂ ತೊಂದರೆಗಳನ್ನು ಎದುರಿಸಬೇಕಾಗಬಹುದು.




