ಭಾರತ ಪಾಕಿಸ್ತಾನದ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ : ಮತ್ತೆ ಪುನರುಚ್ಚರಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಕದನ ವಿರಾಮದಲ್ಲಿ ಅಮೆರಿಕದ ಪಾತ್ರವನ್ನು ನಿರಾಕರಿಸಿದ್ದ ಪ್ರಧಾನಿ ಮೋದಿ

Photo: x/@pmo
ವಾಷಿಂಗ್ಟನ್: ಭಾರತದ ನಿರಾಕರಣೆಯ ಹೊರತಾಗಿಯೂ ತಮ್ಮ ಹೇಳಿಕೆಗೆ ಬದ್ಧರಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಾನೇ ನಿಲ್ಲಿಸಿದೆ ಎಂದು ಮತ್ತೆ ಹೇಳಿದ್ದಾರೆ.
ನಮಗೆ ಯಾರ ಮಧ್ಯಸ್ಥಿಕೆಯೂ ಬೇಕಿಲ್ಲ. ಭಾರತ ಪಾಕಿಸ್ತಾನ ಕದನ ವಿರಾಮ ವಿಚಾರದಲ್ಲಿ ಅಮೆರಿಕವು ಮಧ್ಯಸ್ಥಿಕೆ ವಹಿಸಿಲ್ಲ. ಪಾಕ್ ವಿನಂತಿಯ ಮೇರೆಗೆ ಕದನ ವಿರಾಮ ಘೋಷಿಸಲಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆಸಿದ ದೂರವಾಣಿ ಸಂಭಾಷಣೆಯಲ್ಲಿ ಹೇಳಿದ್ದರು.
ಸುಮಾರು 35 ನಿಮಿಷಗಳ ಕಾಲ ನಡೆದ ದೂರವಾಣಿ ಸಂಭಾಷಣೆಯಲ್ಲಿ ಈ ವಿಚಾರಗಳು ಹೆಚ್ಚಾಗಿ ಚರ್ಚೆ ಗೆ ಬಂದಿದ್ದವು ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿತ್ತು.
ಶ್ವೇತಭವನದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರೊಂದಿಗಿನ ಔತಣ ಕೂಟಕ್ಕೂ ಮುಂಚಿತವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ನಾನು ಭಾರತ ಪಾಕಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸಿದೆ. ನಾನು ಪಾಕಿಸ್ತಾನವನ್ನು ಪ್ರೀತಿಸುತ್ತೇನೆ. ಮೋದಿ ಅದ್ಭುತ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿಕೆ ನೀಡಿದ್ದಾರೆ.
ಸಂಘರ್ಷವನ್ನು ನಿಲ್ಲಿಸುವಲ್ಲಿ ಮುನೀರ್ ಮತ್ತು ಮೋದಿ ಇಬ್ಬರೂ ಅತ್ಯಂತ ಪ್ರಭಾವಶಾಲಿ ಎಂದು ಉಲ್ಲೇಖಿಸಿದ ಟ್ರಂಪ್, ಎರಡೂ ಕಡೆಯವರು ಉದ್ವಿಗ್ನತೆಯನ್ನು ಶಮನಗೊಳಿಸಲು ವ್ಯಾಪಾರ ರಾಜತಾಂತ್ರಿಕತೆಯನ್ನು ಬಳಸಿದ್ದಾರೆ ಎಂದು ಹೇಳಿದ್ದಾರೆ. "ಅವೆರಡೂ ಪರಮಾಣು ರಾಷ್ಟ್ರಗಳು. ನಾನು ಅವರ ನಡುವಿನ ಯುದ್ಧ ನಿಲ್ಲಿಸಿದೆ", ಎಂದು ಮತ್ತೆ ಮತ್ತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.







