ಭಾರತ-ಪಾಕ್ ಸೇರಿದಂತೆ 6 ಸಂಘರ್ಷವನ್ನು ಕೊನೆಗೊಳಿಸಿದ ಟ್ರಂಪ್ ನೊಬೆಲ್ ಪ್ರಶಸ್ತಿಗೆ ಅರ್ಹರು: ಶ್ವೇತಭವನದ ಪ್ರತಿಪಾದನೆ

ಡೊನಾಲ್ಡ್ ಟ್ರಂಪ್ | PC : @IvankaNews_
ವಾಷಿಂಗ್ಟನ್, ಆ.1: ಅಮೆರಿಕದ ಅಧ್ಯಕ್ಷರಾಗಿ ನೇಮಕಗೊಂಡ 6 ತಿಂಗಳಲ್ಲಿ 6 ಶಾಂತಿ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿರುವ ಡೊನಾಲ್ಡ್ ಟ್ರಂಪ್ ನೋಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರಾಗಿದ್ದಾರೆ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕ್ಯಾರೊಲಿನ್ ಲೆವಿಟ್ ಪ್ರತಿಪಾದಿಸಿದ್ದಾರೆ.
ಅಧ್ಯಕ್ಷ ಟ್ರಂಪ್ ಇತ್ತೀಚೆಗಷ್ಟೇ ಥೈಲ್ಯಾಂಡ್-ಕಂಬೋಡಿಯಾ ಸಂಘರ್ಷವನ್ನು ಕೊನೆಗೊಳಿಸಿದ್ದಾರೆ. ಇದಕ್ಕೂ ಮುನ್ನ ಭಾರತ-ಪಾಕಿಸ್ತಾನ, ಇಸ್ರೇಲ್-ಇರಾನ್, ರವಾಂಡಾ ಮತ್ತು ಕಾಂಗೋ ಗಣರಾಜ್ಯ, ಸೆರ್ಬಿಯಾ ಮತ್ತು ಕೊಸೊವೊ, ಈಜಿಪ್ಟ್ ಮತ್ತು ಇಥಿಯೋಪಿಯಾ ನಡುವೆ ಕದನ ವಿರಾಮಕ್ಕೆ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದರು. ವಿವಿಧ ಜಾಗತಿಕ ಸಂಘರ್ಷಗಳನ್ನು ಪರಿಹರಿಸುವಲ್ಲಿ ರಾಜತಾಂತ್ರಿಕ ಪ್ರಯತ್ನ ನಡೆಸಿರುವ ಟ್ರಂಪ್ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲು ಇದು ಸಕಾಲವಾಗಿದೆ ಎಂದು ಲೆವಿಟ್ ಹೇಳಿದ್ದಾರೆ.
ಈ ಮಧ್ಯೆ, ಥೈಲ್ಯಾಂಡ್ ಜೊತೆಗೆ ಕದನ ವಿರಾಮ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ್ದ ಟ್ರಂಪ್ ರನ್ನು ಕಂಬೋಡಿಯಾ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮ ನಿರ್ದೇಶನ ಮಾಡಲಿದೆ ಎಂದು ಕಂಬೋಡಿಯಾದ ಉಪ ಪ್ರಧಾನಿ ಸುನ್ ಚಂಥೋಲ್ ಶುಕ್ರವಾರ ಹೇಳಿದ್ದಾರೆ.





