2026ರಲ್ಲೂ ಭಾರತ-ಪಾಕಿಸ್ತಾನ ಸಂಘರ್ಷ ಸಾಧ್ಯತೆ: ಅಮೆರಿಕ ಚಿಂತಕರ ಚಾವಡಿ ಎಚ್ಚರಿಕೆ

ವಾಷಿಂಗ್ಟನ್: 2026ರಲ್ಲೂ ಭಾರತ ಮತ್ತು ಪಾಕಿಸ್ತಾನದ ನಡುವೆ ಸಶಸ್ತ್ರ ಸಂಘರ್ಷ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಅಮೆರಿಕದ ಚಿಂತಕ ಕೂಟವೊಂದು ಎಚ್ಚರಿಕೆ ನೀಡಿದೆ. ವಿದೇಶಿ ಸಂಪರ್ಕಗಳ ಮಂಡಳಿ ವರದಿ ಅಮೆರಿಕದ ವಿದೇಶಾಂಗ ನೀತಿಯ ತಜ್ಞರನ್ನು ಸಮೀಕ್ಷೆಗೆ ಗುರಿಪಡಿಸಿದೆ. ಟ್ರಂಪ್ ಆಡಳಿತ ಉಭಯ ದೇಶಗಳ ನಡುವಿನ ಸಂಘರ್ಷ ಶಮನಗೊಳಿಸಲು ಯತ್ನಿಸಿತ್ತು ಎಂದು ವಿವರಿಸಿದೆ.
"ಟ್ರಂಪ್ ಆಡಳಿತ ಹಲವು ಸಂಘರ್ಷಗಳನ್ನು ಅಂತ್ಯಗೊಳಿಸಲು ಶ್ರಮಿಸಿತ್ತು. ಇದರಲ್ಲಿ ಕಾಂಗೋ ಗಣರಾಜ್ಯ, ಗಾಝಾ ಪಟ್ಟಿ, ಉಕ್ರೇನ್ ಸೇರಿದ್ದು, ಭಾರತ ಹಾಗೂ ಪಾಕಿಸ್ತಾನ, ಕಾಂಬೋಡಿಯಾ ಮತ್ತು ಥಾಯ್ಲೆಂಡ್ ಸಂಘರ್ಷವೂ ಸೇರಿದೆ" ಎಂದು ವರದಿ ಹೇಳಿದೆ.
ಕಳೆದ ಮೇ ತಿಂಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಮೂರು ದಿನಗಳ ಸಂಘರ್ಷ ಏರ್ಪಟ್ಟಿತ್ತು. ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ದಾಳಿ ನಡೆಸಿ 26 ಮಂದಿಯನ್ನು ಹತ್ಯೆ ಮಾಡಿದ ಬಳಿಕ ಈ ಸಂಷರ್ಘ ಏರ್ಪಟ್ಟಿತ್ತು.
ಗಡಿಯಾಚೆಗಿನ ಉಗ್ರ ದಾಳಿಗಳು ಹೆಚ್ಚುವ ಸಾಧ್ಯತೆಯ ಹಿನ್ನೆಲೆಯಲ್ಲಿ 2026ರಲ್ಲಿ ಉಭಯ ದೇಶಗಳ ನಡುವೆ ಸಂಘರ್ಷ ಸಂಭವಿಸುವ ಸಾಧ್ಯತೆ ಇದೆ ಎಂದು ಸಿಎಫ್ಆರ್ ವರದಿ ಎಚ್ಚರಿಸಿದೆ.





