ವ್ಯಾಪಾರ ಕೊಡುಗೆ ಭಾರತ-ಪಾಕ್ ಯುದ್ಧವನ್ನು ತಪ್ಪಿಸಿದೆ: ಅಮೆರಿಕ ಸರಕಾರ ಹೇಳಿಕೆ

ಡೊನಾಲ್ಡ್ ಟ್ರಂಪ್ | PTI
ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಪೂರ್ಣ ಪ್ರಮಾಣದ ಯುದ್ಧವನ್ನು ತಪ್ಪಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಾಪಾರದ ಕೊಡುಗೆಯನ್ನು ಬಳಸಿದ್ದಾರೆ ಎಂದು ಅಮೆರಿಕದ ಆಡಳಿತ ನ್ಯೂಯಾರ್ಕ್ ಫೆಡರಲ್ ನ್ಯಾಯಾಲಯಕ್ಕೆ ಲಿಖಿತ ದಾಖಲೆಯಲ್ಲಿ ತಿಳಿಸಿದೆ.
ಎಲ್ಲಾ ಆಮದುಗಳ ಮೇಲೆ 10% ಸುಂಕ ವಿಧಿಸುವುದು ಮತ್ತು ನಿರ್ದಿಷ್ಟ ದೇಶಗಳನ್ನು ಗುರಿಯಾಗಿಸಿ ಹೆಚ್ಚುವರಿ ಸುಂಕ ವಿಧಿಸುವ ಟ್ರಂಪ್ ಆಡಳಿತದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಸಂದರ್ಭ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಡಬ್ಲ್ಯೂ. ಲುಟ್ನಿಕ್ ಮೇ 23ರಂದು ನೀಡಿದ್ದ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ರಾಷ್ಟ್ರೀಯ ತುರ್ತು ಅಗತ್ಯದ ಸಂದರ್ಭದಲ್ಲಿ ಆರ್ಥಿಕ ನಿರ್ಬಂಧಗಳನ್ನು ವಿಧಿಸಲು ಸರ್ಕಾರಕ್ಕೆ ಅಧಿಕಾರ ನೀಡುವ ಕಾಯ್ದೆಯಡಿ ಸುಂಕ ಹೇರಿಕೆ ಕ್ರಮವನ್ನು ಟ್ರಂಪ್ ಬಳಸಿರುವುದನ್ನು ಈ ಹೇಳಿಕೆಯಲ್ಲಿ ಲುಟ್ನಿಕ್ ಸಮರ್ಥಿಸಿಕೊಂಡಿದ್ದಾರೆ.
ಕೆಲವು ನಡವಳಿಕೆಗಳು ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದೆ ಎಂಬ ಎಚ್ಚರಿಕೆಯನ್ನು ಇಂತಹ ಕ್ರಮಗಳು ವಿದೇಶಿ ಸರಕಾರಕ್ಕೆ ರವಾನಿಸುತ್ತವೆ. ಉದಾಹರಣೆಗೆ, ಭಾರತ-ಪಾಕ್ ಯುದ್ಧ. ಎರಡು ಪರಮಾಣು ಶಸ್ತ್ರಸಜ್ಜಿತ ದೇಶಗಳ ನಡುವಿನ ಯುದ್ಧವನ್ನು ತಪ್ಪಿಸಿ ಕದನ ವಿರಾಮ ಒಪ್ಪಂದವನ್ನು ಸಾಧ್ಯವಾಗಿಸಿದ್ದು ಟ್ರಂಪ್ ಅವರು ಎರಡೂ ದೇಶಗಳಿಗೆ ನೀಡಿದ ವ್ಯಾಪಾರ ಕೊಡುಗೆ' ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.





