ಶೇ 200ರ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದರಿಂದ ಭಾರತ-ಪಾಕ್ ಯುದ್ಧ ಸ್ಥಗಿತ: ಟ್ರಂಪ್

PC: PTI
ಹೊಸದಿಲ್ಲಿ: ಶಾಂತಿ ಸಂಧಾನ ಮಾತುಕತೆಗಾಗಿ ಸುಂಕ ಕೇಂದ್ರೀಕೃತ ದೃಷ್ಟಿಕೋನವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ. ವಿಶ್ವಸಂಸ್ಥೆಯ ಚೌಕಟ್ಟನ್ನು ಹೋಲುವ ತಮ್ಮದೇ ಶೈಲಿಯ ಶಾಂತಿಮಂಡಳಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಟ್ರಂಪ್, 2025ರ ಮೇ ತಿಂಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ಸಂಘರ್ಷದಲ್ಲಿ ತೊಡಗಿದ್ದ ಸಂದರ್ಭದಲ್ಲಿ, ಯುದ್ಧ ಮುಂದುವರಿಸಿದರೆ ಉಭಯ ದೇಶಗಳ ಮೇಲೆ 200 ಶೇಕಡ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾಗಿ ಬಹಿರಂಗಪಡಿಸಿದ್ದಾರೆ.
ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪಾಕಿಸ್ತಾನದ ಪ್ರಧಾನಿ ಶೆಹಬಾಝ್ ಷರೀಫ್ ಅವರ ಸಮ್ಮುಖದಲ್ಲೇ ಟ್ರಂಪ್ ಈ ವಿಚಾರ ಬಹಿರಂಗಪಡಿಸಿದರು. ಉಭಯ ದೇಶಗಳ ನಡುವಿನ ಯುದ್ಧ ನಿಲ್ಲಿಸುವಲ್ಲಿ ತಮ್ಮ ಪಾತ್ರದ ಬಗ್ಗೆ ತಾವೇ ಹೊಗಳಿಕೊಂಡ ಟ್ರಂಪ್, ಇದನ್ನು ದೃಢೀಕರಿಸಲು ಶಾಂತಿ ಯತ್ನದ ಬಗೆಗಿನ ಷರೀಫ್ ಹೇಳಿಕೆಯನ್ನು ಉಲ್ಲೇಖಿಸಿದರು.
"ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸುವ ಮೂಲಕ 2.5 ಕೋಟಿ ಜನರ ಜೀವವನ್ನು ಟ್ರಂಪ್ ರಕ್ಷಿಸಿದರು ಎಂದು ಸಿಬ್ಬಂದಿ ಮುಖ್ಯಸ್ಥರ ಸಮ್ಮುಖದಲ್ಲೇ ಪಾಕಿಸ್ತಾನದ ಪ್ರಧಾನಿ ಹೇಳಿಕೆ ನೀಡಿದ್ದಾರೆ. ಯುದ್ಧ ರಭಸದಿಂದ ನಡೆಯುತ್ತಿತ್ತು. 11 ವಿಮಾನಗಳನ್ನು ಹೊಡೆದು ಉರುಳಿಸಲಾಗಿತ್ತು. ಅವು ತೀರಾ ದುಬಾರಿ ವಿಮಾನಗಳು. ಇಬ್ಬರ ಜತೆಯೂ ದೂರವಾಣಿ ಸಂಭಾಷಣೆ ನಡೆಸಿದೆ. ಮೋದಿಯವರನ್ನು ನಾನು ಚೆನ್ನಾಗಿ ಬಲ್ಲೆ. ಸಂಘರ್ಷ ಬಗೆಹರಿಸಿಕೊಳ್ಳದಿದ್ದರೆ ನಿಮ್ಮ ಜತೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ದಿಢೀರನೇ ಒಪ್ಪಂದ ಕುದುರಿತು. ನೀವು ಯುದ್ಧ ಮುಂದುವರಿಸಿದರೆ ಎರಡು ದೇಶಗಳ ಮೇಲೂ ಶೇಕಡ 200ರಷ್ಟು ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ. ದೊಡ್ಡ ಪ್ರಮಾಣದ ಹಣ ನಷ್ಟವಾಗುವ ವಿಚಾರ ಬಂದಾಗ, ಯುದ್ಧ ಮುಂದುವರಿಸಲು ಬಯಸುವುದಿಲ್ಲ ಎನ್ನುವುದು ನನ್ನ ಭಾವನೆ." ಎಂದು ಟ್ರಂಪ್ ವಿವರಿಸಿದರು.
ಜಾಗತಿಕ ಶಾಂತಿಯನ್ನು ಸ್ಥಾಪಿಸುವ ಉದ್ದೇಶದ ಶಾಂತಿ ಮಂಡಳಿಯ ಮೊದಲ ಸಭೆಯಲ್ಲಿ ಟ್ರಂಪ್ ಈ ಭಾಷಣ ಮಾಡಿದರು. ಭಾರತ ಸೇರಿದಂತೆ ಹಲವು ದೇಶಗಳಿಗೆ ಈ ಮಂಡಳಿಯ ಸದಸ್ಯತ್ವಕ್ಕೆ ಆಹ್ವಾನ ನೀಡಲಾಗಿದೆ. ಪಾಕಿಸ್ತಾನ ತಕ್ಷಣವೇ ಮಂಡಳಿಯ ಸದಸ್ಯತ್ವ ಪಡೆದಿದೆ. ಭಾರತ-ಪಾಕಿಸ್ತಾನ ಯುದ್ಧವನ್ನು ನಿಲ್ಲಿಸಲು ತಾವು ಮಧ್ಯಸ್ಥಿಕೆ ವಹಿಸಿದ್ದಾಗಿ ಟ್ರಂಪ್ ನೀಡಿದ ಹೇಳಿಕೆಯಿಂದ ಭಾರತ ಇದುವರೆಗೂ ಅಂತರ ಕಾಯ್ದುಕೊಂಡು ಬಂದಿದೆ.






