ದ್ವಿಪಕ್ಷೀಯ ಸಂಬಂಧ ಬಲವರ್ಧನೆಗೆ ಭಾರತ-ಖತರ್ ಸಮ್ಮತಿ
ಖತರ್ ಅಮೀರ್ ಜತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ

PHOTO : PTI
ದೋಹ: ಖತರ್ಗೆ ಆಗಮಿಸಿರುವ ಪ್ರಧಾನಿ ಮೋದಿ ಗುರುವಾರ ಖತರ್ ಅಮೀರ್ ತಮೀಮ್ ಬಿನ್ ಹಮದ್ ಅಲ್ಥಾನಿಯವರನ್ನು ಭೇಟಿಯಾಗಿದ್ದು ಉಭಯ ಮುಖಂಡರು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವ ಬಗ್ಗೆ, ವ್ಯಾಪಾರ ಸಂಬಂಧಗಳನ್ನು ಗಾಢಗೊಳಿಸುವ ಬಗ್ಗೆ ವ್ಯಾಪಕ ಚರ್ಚೆ ನಡೆಸಿದರು.
ಯುಎಇ ಭೇಟಿಯ ಬಳಿಕ ಬುಧವಾರ ರಾತ್ರಿ ಖತರ್ಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಖತರ್ನ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರು ಹಾರ್ದಿಕವಾಗಿ ಸ್ವಾಗತಿಸಿದರು. ಇದು ಖತರ್ಗೆ ಮೋದಿ ನೀಡುತ್ತಿರುವ ಎರಡನೇ ಭೇಟಿಯಾಗಿದೆ. ದೋಹಾದಲ್ಲಿ ಬುಧವಾರ ರಾತ್ರಿ ಖತರ್ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ಥಾನಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ವ್ಯಾಪಾರ, ಹೂಡಿಕೆ, ಇಂಧನ, ಹಣಕಾಸು ಮತ್ತು ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ವಿಸ್ತರಿಸುವ ಕುರಿತು ಉಭಯ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಪಶ್ಚಿಮ ಏಶ್ಯಾದಲ್ಲಿ ಇತ್ತೀಚಿನ ಪ್ರಾದೇಶಿಕ ಬೆಳವಣಿಗೆಯನ್ನು ಚರ್ಚಿಸಿದರು ಮತ್ತು ಪ್ರದೇಶ ಹಾಗೂ ಅದರಾಚೆಗೆ ಶಾಂತಿ ಮತ್ತು ಸ್ಥಿರತೆಯನ್ನು ಎತ್ತಿಹಿಡಿಯುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು ಎಂದು ಭಾರತದ ವಿದೇಶಾಂಗ ಇಲಾಖೆ ಹೇಳಿದೆ. ಸಭೆಯ ಬಳಿಕ ಖತರ್ ಪ್ರಧಾನಿ ಮೋದಿಯವರಿಗೆ ಔತಣ ಕೂಟವನ್ನು ಆಯೋಜಿಸಿದ್ದರು.
ಗುರುವಾರ ಖತರ್ ಅಮೀರ್ ತಮೀಮ್ ಬಿನ್ ಹಮದ್ ಅಲ್ಥಾನಿಯವರ ಜತೆ ನರೇಂದ್ರ ಮೋದಿ ನಡೆಸಿದ ದ್ವಿಪಕ್ಷೀಯ ಮಾತುಕತೆಯಲ್ಲಿ ಭವಿಷ್ಯದ ಕ್ಷೇತ್ರಗಳಲ್ಲಿ ಸಹಯೋಗ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಸಲಾಯಿತು. `ಖತರ್ನ ಗೌರವಾನ್ವಿತ ಅಮೀರ್ ಜತೆಗೆ ಅದ್ಭುತ ಸಭೆ ನಡೆಸಿದೆ. ಭಾರತ-ಖತರ್ ಸಂಬಂಧಗಳ ಸಂಪೂರ್ಣ ಶ್ರೇಣಿಯನ್ನು ಪರಿಶೀಲಿಸಿದ್ದೇವೆ. ನಮ್ಮ ದೇಶಕ್ಕೆ ಪ್ರಯೋಜನವನ್ನು ನೀಡುವ ಭವಿಷ್ಯದ ಕ್ಷೇತ್ರಗಳಲ್ಲಿ ಸಹಕರಿಸಲು ಉಭಯ ದೇಶಗಳೂ ಎದುರು ನೋಡುತ್ತಿವೆ' ಎಂದು ಸಭೆಯ ಬಳಿಕ ನರೇಂದ್ರ ಮೋದಿ `ಎಕ್ಸ್'(ಟ್ವೀಟ್) ಮಾಡಿದ್ದಾರೆ.
ಫಲಪ್ರದ ಮಾತುಕತೆ: ಭಾರತ
ಭಾರತ-ಖತರ್ ಸಂಬಂಧಗಳು ಬಲಗೊಳ್ಳುತ್ತಿವೆ. ಉಭಯ ಮುಖಂಡರ ನಡುವಿನ ಮಾತುಕತೆ ಅತ್ಯಂತ ಫಲಪ್ರದವಾಗಿತ್ತು. ಖತರ್ನಲ್ಲಿ ಭಾರತೀಯ ಸಮುದಾಯದ ಹಿತಚಿಂತನೆಗೆ ಆದ್ಯತೆ ನೀಡುತ್ತಿರುವ ಖತರ್ ನಾಯಕತ್ವಕ್ಕೆ ಪ್ರಧಾನಿ ಮೋದಿ ಅಭಿನಂದನೆ ಸಲ್ಲಿಸಿದರು ಎಂದು ಭಾರತದ ವಿದೇಶಾಂಗ ಇಲಾಖೆಯ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಉಭಯ ನಾಯಕರು ದ್ವಿಪಕ್ಷೀಯ ಸಂಬಂಧಗಳನ್ನು ಗಾಢವಾಗಿಸುವ ಬಗ್ಗೆ ವ್ಯಾಪಕವಾದ ಚರ್ಚೆಗಳನ್ನು ನಡೆಸಿದ್ದಾರೆ ಎಂದವರು `ಎಕ್ಸ್'(ಟ್ವೀಟ್) ಮಾಡಿದ್ದಾರೆ







