ಟ್ರಂಪ್ ಕೋರಿಕೆ ಮೇರೆಗೆ ಭಾರತವು ರಷ್ಯಾದಿಂದ ತೈಲ ಆಮದು ಕಡಿಮೆ ಮಾಡುತ್ತಿದೆ: ಶ್ವೇತಭವನ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೋರಿಕೆಯ ಮೇರೆಗೆ ಭಾರತವು ರಷ್ಯಾದಿಂದ ತೈಲ ಆಮದನ್ನು ಕಡಿಮೆ ಮಾಡಲು ಆರಂಭಿಸಿದೆ ಎಂದು ಶ್ವೇತಭವನವು ಹೇಳಿದೆ.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು, ರಷ್ಯಾದ ಮೇಲೆ ಹೇರಲಾಗಿರುವ ನಿರ್ಬಂಧಗಳನ್ನು ನೀವು ಗಮನಿಸಿದರೆ ಅವು ತುಂಬ ಕಠಿಣವಾಗಿವೆ ಎಂದರು.
ರಷ್ಯಾ-ಉಕ್ರೇನ್ ಯುದ್ಧದ ನಡುವೆ ಮಾಸ್ಕೋಕ್ಕೆ ಪ್ರಮುಖ ಆದಾಯ ಮೂಲವನ್ನು ಹತ್ತಿಕ್ಕುವ ತನ್ನ ಪ್ರಯತ್ನಗಳ ಭಾಗವಾಗಿ ಅಮೆರಿಕವು ಬುಧವಾರ ರಷ್ಯಾದ ಎರಡು ಅತಿ ದೊಡ್ಡ ತೈಲ ಕಂಪನಿಗಳಾದ ರೊಸ್ನೆಫ್ಟ್ ಮತ್ತು ಲುಕೊಯಿಲ್ ಮೇಲೆ ವಿಧಿಸಿರುವ ನಿರ್ಬಂಧಗಳನ್ನು ಲೀವಿಟ್ ಉಲ್ಲೇಖಿಸುತ್ತಿದ್ದರು.
‘ಚೀನಾ ರಷ್ಯಾದಿಂದ ತೈಲ ಆಮದು ಕಡಿತಗೊಳಿಸುತ್ತಿದೆ ಎಂದು ಸೂಚಿಸುವ ಕೆಲವು ಅಂತರರಾಷ್ಟ್ರೀಯ ಸುದ್ದಿಗಳನ್ನು ನಾನು ಗಮನಿಸಿದ್ದೇನೆ. ಭಾರತವೂ ಅಧ್ಯಕ್ಷರ ಕೋರಿಕೆಯ ಮೇರೆಗೆ ಅದೇ ದಾರಿಯಲ್ಲಿ ಸಾಗುತ್ತಿದೆ ಎನ್ನುವುದು ನಮಗೆ ತಿಳಿದಿದೆ ’ ಎಂದು ಹೇಳಿದ ಲೀವಿಟ್, ರಷ್ಯಾದಿಂದ ತೈಲ ಆಮದನ್ನು ಕಡಿತಗೊಳಿಸುವಂತೆ ಅಮೆರಿಕವು ತನ್ನ ಮಿತ್ರದೇಶಗಳನ್ನೂ ಆಗ್ರಹಿಸಿದೆ ಎಂದು ತಿಳಿಸಿದರು.
ಸೂಕ್ತ ಮತ್ತು ಅಗತ್ಯವೆಂದು ತಾನು ಭಾವಿಸಿದಾಗ ರಷ್ಯಾದ ವಿರುದ್ಧ ಕ್ರಮವನ್ನು ತೆಗೆದುಕೊಳ್ಳುವುದಾಗಿ ಟ್ರಂಪ್ ಹಿಂದೆಯೇ ಸಂಕೇತ ನೀಡಿದ್ದರು ಮತ್ತು ಬುಧವಾರ ಆ ದಿನವಾಗಿತ್ತು ಎಂದು ಹೇಳಿದ ಲೀವಿಟ್, ಶಾಂತಿ ಇತ್ಯರ್ಥವನ್ನು ಸಾಧಿಸುವಲ್ಲಿ ಸಾಕಷ್ಟು ಆಸಕ್ತಿಯನ್ನು ತೋರಿಸದ್ದಕ್ಕಾಗಿ ಮತ್ತು ಕ್ರಮವನ್ನು ಕೈಗೊಳ್ಳದ್ದಕ್ಕಾಗಿ ಟ್ರಂಪ್ ಅವರು ರಷ್ಯಾದ ಅಧ್ಯಕ್ಷ ಪುಟಿನ್ ಬಗ್ಗೆ ಹಿಂದೆಯೇ ಹತಾಶೆಯನ್ನು ವ್ಯಕ್ತಪಡಿಸಿದ್ದರು ಎಂದರು.
ಟ್ರಂಪ್ ಮತ್ತು ಪುಟಿನ್ ಈ ವರ್ಷಾಂತ್ಯದಲ್ಲಿ ಹಂಗೇರಿಯಲ್ಲಿ ಪರಸ್ಪರ ಭೇಟಿಯಾಗುವ ನಿರೀಕ್ಷೆಯಿತ್ತು, ಆದರೆ ಈ ಭೇಟಿಯನ್ನು ಈಗ ಮುಂದೂಡಲಾಗಿದೆ ಎಂದು ತಿಳಿಸಿದ ಲೀವಿಟ್, ಆದಾಗ್ಯೂ ಉಭಯ ನಾಯಕರ ಭೇಟಿ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿ ಹಾಕಲಾಗಿಲ್ಲ ಮತ್ತು ಅದು ಒಂದು ದಿನ ಮತ್ತೆ ಸಾಧ್ಯವಾಗಬಹುದು ಎಂದು ಹೇಳಿದರು.
ತಾನು ರಷ್ಯಾದಿಂದ ತೈಲ ಆಮದನ್ನು ಗಣನೀಯವಾಗಿ ಕಡಿತಗೊಳಿಸುವುದಾಗಿ ಭಾರತವು ಭರವಸೆ ನೀಡಿದೆ ಎಂದು ಟ್ರಂಪ್ ಮತ್ತು ಅವರ ಆಡಳಿತ ಕೆಲವು ದಿನಗಳಿಂದ ಹೇಳುತ್ತಲೇ ಬಂದಿದ್ದಾರೆ. ಇದರಲ್ಲಿ ವಿಫಲಗೊಂಡರೆ ಭಾರತವು ಭಾರೀ ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಕೆಯನ್ನೂ ನೀಡಿದ್ದಾರೆ. ಆದಾಗ್ಯೂ ಭಾರತವು ಮಾತ್ರ ತನ್ನ ಇಂಧನ ನೀತಿಯು ತನ್ನ ರಾಷ್ಟ್ರೀಯ ಹಿತಾಸಕ್ತಿಯಿಂದ ಪ್ರಭಾವಿತವಾಗಿದೆ ಮತ್ತು ವಿಶೇಷವಾಗಿ ತನ್ನ ಬಳಕೆದಾರರಿಗೆ ಅಗ್ಗದ ದರಗಳಲ್ಲಿ ಸುರಕ್ಷಿತ ಪೂರೈಕೆಯನ್ನು ತಾನು ಖಚಿತಪಡಿಸುತ್ತಿದ್ದೇನೆ ಎಂದು ಸ್ಪಷ್ಟ ಪಡಿಸಿದೆ.







