ಫೆಲೆಸ್ತೀನಿಯನ್ನರ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಸಾರ್ವಭೌಮತ್ವದ ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತದ ಬೆಂಬಲ
ಇಸ್ರೇಲ್ ನಿಂದ ಸಂಪನ್ಮೂಲಗಳ ಶೋಷಣೆ, ಪರಿಸರ ಹಾನಿ ತಡೆಗೆ ಆಗ್ರಹ

Photo Credit: AP
ವಾಷಿಂಗ್ಟನ್: ಫೆಲೆಸ್ತೀನಿಯರು ಮತ್ತು ಆಕ್ರಮಿತ ಸಿರಿಯನ್ ಗೋಲನ್ ನ ಅರಬ್ ಜನಸಂಖ್ಯೆಯ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಅಳಿಸಲಾಗದ ಹಕ್ಕುಗಳನ್ನು ಪುನರುಚ್ಚರಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದೆ. ನೈಸರ್ಗಿಕ ಸಂಪನ್ಮೂಲಗಳ ಶೋಷಣೆ, ನಾಶ ಮತ್ತು ಪರಿಸರಕ್ಕೆ ಹಾನಿ ಉಂಟುಮಾಡುವ ಚಟುವಟಿಕೆಗಳನ್ನು ನಿಲ್ಲಿಸುವಂತೆ ನಿರ್ಣಯವು ಇಸ್ರೇಲ್ ಅನ್ನು ಆಗ್ರಹಿಸಿದೆ.
193 ಸದಸ್ಯ ಬಲದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬುಧವಾರ (ನ. 11) ಉರುಗ್ವೆ ಮಂಡಿಸಿದ ಈ ನಿರ್ಣಯವನ್ನು ಭಾರಿ ಬಹುಮತದಿಂದ ಅಂಗೀಕರಿಸಲಾಯಿತು. ನಿರ್ಣಯವು ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶ ಮತ್ತು ಸಿರಿಯನ್ ಗೋಲನ್ ನ ಅರಬ್ ಜನರ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಸಾರ್ವಭೌಮತ್ವವನ್ನು ಪುನರುಚ್ಚರಿಸಿದೆ.
ಭಾರತ ಸೇರಿದಂತೆ 151 ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಚಲಾಯಿಸಿದವು. 11 ರಾಷ್ಟ್ರಗಳು ಮತದಾನದಿಂದ ದೂರ ಉಳಿದವು. ಇಸ್ರೇಲ್ ಮತ್ತು ಅಮೆರಿಕ ಸೇರಿದಂತೆ ಏಳು ರಾಷ್ಟ್ರಗಳು ನಿರ್ಣಯದ ವಿರುದ್ಧ ಮತ ಚಲಾಯಿಸಿದವು.
ಫೆಲೆಸ್ತೀನ್ ಜನರು ಮತ್ತು ಆಕ್ರಮಿತ ಸಿರಿಯನ್ ಗೋಲನ್ ನ ಜನಸಂಖ್ಯೆಯ ಭೂಮಿ, ನೀರು ಮತ್ತು ಇಂಧನ ಸಂಪನ್ಮೂಲಗಳು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಅಳಿಸಲಾಗದ ಹಕ್ಕುಗಳನ್ನು ನಿರ್ಣಯವು ಪುನರುಚ್ಚರಿಸಿದೆ.
ಪೂರ್ವ ಜೆರುಸಲೆಮ್ ಸೇರಿದಂತೆ ಆಕ್ರಮಿತ ಫೆಲೆಸ್ತೀನಿನ ಪ್ರದೇಶಗಳು ಹಾಗೂ ಆಕ್ರಮಿತ ಸಿರಿಯನ್ ಗೋಲನ್ ನಲ್ಲಿರುವ ನೈಸರ್ಗಿಕ ಸಂಪನ್ಮೂಲಗಳ ಶೋಷಣೆ, ಅವುಗಳಿಗೆ ಹಾನಿ ಮಾಡುವುದು, ನಷ್ಟ ಮತ್ತು ಬರಿದಾಗಿಸುವಿಕೆಗೆ ಕಾರಣವಾಗುವ ಎಲ್ಲ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಇಸ್ರೇಲ್ ಗೆ ಆಗ್ರಹಿಸಲಾಗಿದೆ.
ಆಕ್ರಮಿತ ಫೆಲೆಸ್ತೀನಿನ ಪ್ರದೇಶಗಳಲ್ಲಿ, ವಿಶೇಷವಾಗಿ ಪೂರ್ವ ಜೆರುಸಲೆಮ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಸ್ರೇಲ್ ನಿರ್ಮಿಸುತ್ತಿರುವ ಗೋಡೆ ಹಾಗೂ ವಸಾಹತುಗಳು ಅಂತರರಾಷ್ಟ್ರೀಯ ಕಾನೂನಿಗೆ ವಿರುದ್ಧವಾಗಿವೆ. ಇವು ಫೆಲೆಸ್ತೀನಿಯರನ್ನು ಅವರ ನೈಸರ್ಗಿಕ ಸಂಪನ್ಮೂಲಗಳಿಂದ ಗಂಭೀರವಾಗಿ ವಂಚಿತರನ್ನಾಗಿ ಮಾಡುತ್ತಿವೆ ಎಂದು ನಿರ್ಣಯವು ಒತ್ತಿಹೇಳಿದೆ.
ಅಂತರರಾಷ್ಟ್ರೀಯ ನ್ಯಾಯಾಲಯವು 2004ರ ಜುಲೈನಲ್ಲಿ ನೀಡಿದ ಸಲಹಾ ಅಭಿಪ್ರಾಯದಲ್ಲಿ ದೃಢಪಡಿಸಿರುವ ಕಾನೂನು ಬಾಧ್ಯತೆಗಳು ಮತ್ತು ವಿಶ್ವಸಂಸ್ಥೆಯ ಸಂಬಂಧಿತ ನಿರ್ಣಯಗಳನ್ನು ಸಂಪೂರ್ಣವಾಗಿ ಪಾಲಿಸುವಂತೆಯೂ ಕರೆ ನೀಡಲಾಗಿದೆ. ಪೂರ್ವ ಜೆರುಸಲೆಮ್ ಸೇರಿದಂತೆ ಆಕ್ರಮಿತ ಫೆಲೆಸ್ತೀನಿನ ಪ್ರದೇಶಗಳ ಸ್ವರೂಪ ಮತ್ತು ಸ್ಥಾನಮಾನವನ್ನು ಬದಲಾಯಿಸುವ ಉದ್ದೇಶದ ಎಲ್ಲ ನೀತಿಗಳು ಹಾಗೂ ಕ್ರಮಗಳನ್ನು ತಕ್ಷಣವೇ ಮತ್ತು ಸಂಪೂರ್ಣವಾಗಿ ಕೈಬಿಡುವಂತೆಯೂ ನಿರ್ಣಯ ಆಗ್ರಹಿಸಿದೆ.
ಆಕ್ರಮಿತ ಫೆಲೆಸ್ತೀನಿಯನ್ ಪ್ರದೇಶಗಳು, ಪೂರ್ವ ಜೆರುಸಲೆಮ್ ಮತ್ತು ಆಕ್ರಮಿತ ಸಿರಿಯನ್ ಗೋಲನ್ ನಲ್ಲಿ ತ್ಯಾಜ್ಯ ವಸ್ತುಗಳನ್ನು ಸುರಿಯುವುದು ಸೇರಿದಂತೆ ಪರಿಸರಕ್ಕೆ ಹಾನಿ ಉಂಟುಮಾಡುವ ಎಲ್ಲ ಚಟುವಟಿಕೆಗಳನ್ನು ತಡೆಯುವಂತೆ ಇಸ್ರೇಲ್ ಗೆ ಕರೆ ನೀಡಲಾಗಿದೆ. ಇಸ್ರೇಲಿ ವಸಾಹತುಗಾರರು ನಡೆಸುವ ಇಂತಹ ಕೃತ್ಯಗಳನ್ನೂ ತಡೆಯುವಂತೆ ಸೂಚಿಸಲಾಗಿದೆ.
ನೀರಿನ ಕೊಳವೆ ಮಾರ್ಗಗಳು, ಒಳಚರಂಡಿ ಜಾಲಗಳು ಮತ್ತು ವಿದ್ಯುತ್ ಜಾಲಗಳಂತಹ ಪ್ರಮುಖ ಮೂಲಸೌಕರ್ಯಗಳನ್ನು ನಾಶಪಡಿಸುವುದನ್ನು ನಿಲ್ಲಿಸುವಂತೆಯೂ ಇಸ್ರೇಲ್ ಗೆ ಆಗ್ರಹಿಸಲಾಗಿದೆ. ಫೆಲೆಸ್ತೀನಿಯರ ಮನೆಗಳು, ನಾಗರಿಕ ಮೂಲಸೌಕರ್ಯಗಳು, ಕೃಷಿ ಭೂಮಿಗಳು ಮತ್ತು ನೀರಿನ ಬಾವಿಗಳನ್ನು ಧ್ವಂಸಗೊಳಿಸುವುದು ಹಾಗೂ ವಶಪಡಿಸಿಕೊಳ್ಳುವುದನ್ನು ನಿಲ್ಲಿಸುವಂತೆ ನಿರ್ಣಯವು ಒತ್ತಾಯಿಸಿದೆ.
ಗಾಝಾ ಪಟ್ಟಿಯನ್ನೂ ಒಳಗೊಂಡಂತೆ ಆಕ್ರಮಿತ ಪ್ರದೇಶಗಳಲ್ಲಿ ಪುನರ್ನಿರ್ಮಾಣ ಮತ್ತು ಅಭಿವೃದ್ಧಿ ಯೋಜನೆಗಳನ್ನು ಮುಂದುವರಿಸುವ ತುರ್ತು ಅಗತ್ಯವನ್ನು ನಿರ್ಣಯವು ಒತ್ತಿಹೇಳಿದೆ. ಈ ಉದ್ದೇಶಕ್ಕಾಗಿ ಕೈಗೊಳ್ಳುವ ಅಗತ್ಯ ಪ್ರಯತ್ನಗಳಿಗೆ ಬೆಂಬಲ ನೀಡುವಂತೆಯೂ ಕರೆ ನೀಡಿದೆ.






