ಹಾರ್ಮುಝ್ನಲ್ಲಿ ಸುರಕ್ಷಿತ ಕಡಲ ಮಾರ್ಗ ಮರುಸ್ಥಾಪಿಸುವಂತೆ ವಿಶ್ವಸಂಸ್ಥೆಯಲ್ಲಿ ಭಾರತ ಆಗ್ರಹ

ಯೋಜ್ನಾ ಪಟೇಲ್ - File photo |ANI
ವಿಶ್ವಸಂಸ್ಥೆ, ಎ.28: ಹಾರ್ಮುಝ್ ಜಲಸಂಧಿಯ ಮೂಲಕ ಸುರಕ್ಷಿತ ಮತ್ತು ಅಡೆತಡೆಯಿಲ್ಲದ ಸಮುದ್ರ ಮಾರ್ಗವನ್ನು ಶೀಘ್ರವಾಗಿ ಮರುಸ್ಥಾಪಿಸಬೇಕೆಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಆಗ್ರಹಿಸಿದ್ದು ಪ್ರಮುಖ ಜಲಮಾರ್ಗಗಳ ಯಾವುದೇ ಉದ್ದೇಶಪೂರ್ವಕ ಮುಚ್ಚುವಿಕೆ ಜಾಗತಿಕ ಆರ್ಥಿಕತೆಗೆ ನೇರ ಪರಿಣಾಮಗಳನ್ನು ಬೀರುತ್ತದೆ ಎಂದು ಒತ್ತಿಹೇಳಿದೆ.
`ಜಲಮಾರ್ಗಗಳಲ್ಲಿ ಸುರಕ್ಷಿತ ಪ್ರಯಾಣ' ಎಂಬ ವಿಷಯದ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ನಡೆದ ಮುಕ್ತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ಪ್ರತಿನಿಧಿ ಯೋಜ್ನಾ ಪಟೇಲ್ `ಜಾಗತಿಕ ಭದ್ರತೆ ಮತ್ತು ಆರ್ಥಿಕ ಸಮೃದ್ಧಿಗೆ ಸಮುದ್ರದ ಭದ್ರತೆ ಮತ್ತು ಜಲಮಾರ್ಗಗಳ ರಕ್ಷಣೆ ಅತ್ಯಗತ್ಯ ಎಂಬುದು ಭಾರತದ ನಿಲುವಾಗಿದೆ. ಪ್ರಮುಖ ವ್ಯಾಪಾರ ರಾಷ್ಟ್ರವಾಗಿರುವ ಹಾರ್ಮುಝ್ ಜಲಸಂಧಿಯ ಮೂಲಕ ಸಾಗುವ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸುವುದನ್ನು ಮತ್ತು ಮುಗ್ಧ ನಾಗರಿಕ ಸಿಬ್ಬಂದಿಗಳಿಗೆ ಎದುರಾಗಿರುವ ಅಪಾಯವನ್ನು ಭಾರತ ಬಲವಾಗಿ ಖಂಡಿಸುತ್ತದೆ. ಇಂತಹ ಕ್ರಮಗಳು ಭಾರತೀಯ ನಾವಿಕರು ಸೇರಿದಂತೆ ಹಲವಾರು ಅಮೂಲ್ಯ ಜೀವಗಳ ನಷ್ಟಕ್ಕೆ ಕಾರಣವಾಗಿದೆ ಮತ್ತು ಇದು ಸ್ವೀಕಾರಾರ್ಹವಲ್ಲ' ಎಂದು ಹೇಳಿದ್ದಾರೆ.
ಸಭೆಯನ್ನುದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ `ಜಗತ್ತಿನ ಜಲಮಾರ್ಗಗಳ ಸುರಕ್ಷತೆಯು ಅಂತಾರಾಷ್ಟ್ರೀಯ ವ್ಯವಸ್ಥೆಗೆ ಪರೀಕ್ಷೆಯಾಗಿದೆ. ಮಾರ್ಚ್ ಆರಂಭದಿಂದ ಜಗತ್ತಿನ ಅತ್ಯಂತ ನಿಣಾಯಕ ಕಡಲ ಮಾರ್ಗಗಳಲ್ಲಿ ಒಂದಾದ ಹಾರ್ಮುಝ್ ಜಲಸಂಧಿಯ ಮೂಲಕ ಸಾಗಾಟದ ಅಡ್ಡಿಯು ಜಾಗತಿಕ ಇಂಧನ ಭದ್ರತೆ, ಆಹಾರ ಸರಬರಾಜು ಮತ್ತು ವ್ಯಾಪಾರದ ಮೇಲೆ ಪರಿಣಾಮ ಬೀರಿದೆ' ಎಂದು ಕಳವಳ ವ್ಯಕ್ತಪಡಿಸಿದರು. ಯಾವುದೇ ಸುಂಕವಿಲ್ಲದೆ, ತಾರತಮ್ಯವಿಲ್ಲದೆ ಹಡಗುಗಳು ಹಾದುಹೋಗಲಿ. ವ್ಯಾಪಾರ ಪುನರಾರಂಭವಾಗಲಿ ಮತ್ತು ಜಾಗತಿಕ ಆರ್ಥಿಕತೆ ಉಸಿರಾಡಲಿ' ಎಂದು ಗುಟೆರಸ್ ಸಂಘರ್ಷದಲ್ಲಿರುವ ಪಕ್ಷಗಳಿಗೆ ಮನವಿ ಮಾಡಿದ್ದಾರೆ.






