ಫೆಲೆಸ್ತೀನ್ ಪರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯಗಳಿಗೆ ಭಾರತ ಬೆಂಬಲ

ಸಾಂದರ್ಭಿಕ ಚಿತ್ರ (credit: UN Photo/Manuel Elias)
ಜೆರುಸಲೇಂ: ಫೆಲೆಸ್ತೀನ್ ಜನರ ಸ್ವಯಂ ನಿರ್ಣಯದ ಹಕ್ಕನ್ನು ಪ್ರತಿಪಾದಿಸುವುದು ಸೇರಿದಂತೆ ಫೆಲೆಸ್ತೀನ್ ಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಾಲ್ಕು ನಿರ್ಣಯಗಳ ಪರವಾಗಿ ಭಾರತ ಮತ ಚಲಾಯಿಸಿದೆ.
193 ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಬುಧವಾರ ಈ ನಿರ್ಣಯಗಳ ಕುರಿತು ಮತದಾನ ನಡೆಯಿತು. ಫೆಲೆಸ್ತೀನ್ ಜನರ ಸ್ವಯಂ ನಿರ್ಣಯದ ಹಕ್ಕಿಗೆ ಸಂಬಂಧಿಸಿದ ನಿರ್ಣಯವನ್ನು ಭಾರತ ಬೆಂಬಲಿಸಿದೆ. ಈ ನಿರ್ಣಯದ ಪರವಾಗಿ 162 ಮತಗಳು ಚಲಾವಣೆಯಾದರೆ, 8 ರಾಷ್ಟ್ರಗಳು ವಿರೋಧವಾಗಿ ಮತ ಚಲಾಯಿಸಿವೆ. 8 ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ.
ಫೆಲೆಸ್ತೀನ್ ನಿರಾಶ್ರಿತರಿಗಾಗಿ ಕಾರ್ಯನಿರ್ವಹಿಸುತ್ತಿರುವ ವಿಶ್ವಸಂಸ್ಥೆಯ ಏಜೆನ್ಸಿಯ ಮುಂದುವರಿಕೆಗೆ ಬೆಂಬಲ ನೀಡುವುದು ಹಾಗೂ ಆಕ್ರಮಿತ ಪ್ರದೇಶಗಳಲ್ಲಿನ ಇಸ್ರೇಲಿ ವಸಾಹತುಗಳು ಕಾನೂನುಬಾಹಿರ ಎಂದು ಘೋಷಿಸುವ ಕುರಿತ ನಿರ್ಣಯದ ಪರವೂ ಭಾರತ ಮತಚಲಾಯಿಸಿದೆ.
ಫೆಲೆಸ್ತೀನ್ ನಿರಾಶ್ರಿತರಿಗಾಗಿ ಕಾರ್ಯನಿರ್ವಹಿಸುವ UNRWA ಚಟುವಟಿಕೆಗಳಿಗೆ ಸಂಬಂಧಿಸಿದ ನಿರ್ಣಯದ ಪರವಾಗಿ ಭಾರತ ಮತ ಚಲಾಯಿಸಿದೆ. UNRWA ತನ್ನ ಕಾರ್ಯಚಟುವಟಿಕೆಗಳನ್ನು ಮುಂದುವರಿಸುವ ಅಗತ್ಯವನ್ನು ನಿರ್ಣಯವು ಪುನರುಚ್ಚರಿಸಿದೆ.
ಫೆಲೆಸ್ತೀನ್ ನಿರಾಶ್ರಿತರಿಗೆ ತುರ್ತು ನೆರವು ಸೇರಿದಂತೆ ವಿವಿಧ ಸೇವೆಗಳನ್ನು ಯಾವುದೇ ಅಡೆತಡೆಯಿಲ್ಲದೆ ಒದಗಿಸುವ ಮಹತ್ವವನ್ನು ನಿರ್ಣಯವು ಹೇಳುತ್ತದೆ.
ಈ ನಿರ್ಣಯದ ಪರವಾಗಿ 143 ದೇಶಗಳು ಮತ ಚಲಾಯಿಸಿದರೆ, ಇಸ್ರೇಲ್ ಮತ್ತು ಅಮೆರಿಕ ಸೇರಿದಂತೆ 9 ದೇಶಗಳು ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸಿವೆ. 20 ದೇಶಗಳು ಮತದಾನದಿಂದ ದೂರ ಉಳಿದಿವೆ.
ಫೆಲೆಸ್ತೀನ್ ನಿರಾಶ್ರಿತರ ಆಸ್ತಿ ಮತ್ತು ಆದಾಯಕ್ಕೆ ಸಂಬಂಧಿಸಿದ ನಿರ್ಣಯವನ್ನೂ ಭಾರತ ಬೆಂಬಲಿಸಿದೆ.






