ಆಸ್ಟ್ರೇಲಿಯಾ: ಭಾರತೀಯನ ಮೇಲೆ ಜನಾಂಗೀಯ ನಿಂದನೆ, ಗುಂಪು ಹಲ್ಲೆ

ಚರಣ್ಪ್ರೀತ್ ಸಿಂಗ್ (Photo credit: indiatoday.in)
ಅಡಿಲೇಡ್ : ದಕ್ಷಿಣ ಆಸ್ಟ್ರೇಲಿಯಾದ ಅಡಿಲೇಡ್ನಲ್ಲಿ ಕಾರು ಪಾರ್ಕಿಂಗ್ ವಿವಾದಕ್ಕೆ ಸಂಬಂಧಿಸಿ ಅಪರಿಚಿತ ವ್ಯಕ್ತಿಗಳ ಗುಂಪೊಂದು ಭಾರತೀಯರೋರ್ವರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿ ಜನಾಂಗೀಯ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ.
ʼದಿ ಆಸ್ಟ್ರೇಲಿಯಾ ಟುಡೇ ಪ್ರಕಾರʼ, ಕಿಂಟೋರ್ ಅವೆನ್ಯೂ ಬಳಿ ಈ ಘಟನೆ ನಡೆದಿದೆ. ʼಶನಿವಾರ ರಾತ್ರಿ ಗುಂಪೊಂದು ಜನಾಂಗೀಯ ನಿಂದನೆಗೈದು ಯಾವುದೇ ಪ್ರಚೋದನೆಯಿಲ್ಲದೆ ಪ್ರಜ್ಞೆ ತಪ್ಪುವವರೆಗೂ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆʼ ಎಂದು ಚರಣ್ಪ್ರೀತ್ ಸಿಂಗ್ ಆರೋಪಿಸಿದ್ದಾರೆ.
ಈ ಕುರಿತ ವೀಡಿಯೊ ಕೂಡ ವೈರಲ್ ಆಗಿದೆ. ಆರೋಪಿಗಳು ಚರಣ್ಪ್ರೀತ್ ಸಿಂಗ್ ಮುಖ ಮತ್ತು ಹೊಟ್ಟೆ ಭಾಗಕ್ಕೆ ನಿರಂತರವಾಗಿ ಒದೆಯುವುದು. ಈ ವೇಳೆ ಮಹಿಳೆಯೋರ್ವರು ಕಿರುಚುತ್ತಾ ತಡೆಯಲು ಪ್ರಯತ್ನಿಸುತ್ತಿರುವುದು. ಆರೋಪಿಗಳು ಸ್ಥಳದಿಂದ ಪರಾರಿಯಾಗುವುದು ವೀಡಿಯೊದಲ್ಲಿ ಸೆರೆಯಾಗಿದೆ.
ಹಲ್ಲೆಯಿಂದ ಚರಣ್ಪ್ರೀತ್ ಸಿಂಗ್ಗೆ ಗಂಭೀರವಾಗಿ ಗಾಯಗಳಾಗಿವೆ. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಹಲ್ಲೆಗೆ ಸಂಬಂಧಿಸಿ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯಿಂದ ಅಡಿಲೇಡ್ನಲ್ಲಿ ಭಾರತೀಯ ವಿದ್ಯಾರ್ಥಿಗಳು ಮತ್ತು ವಲಸಿಗರ ಸುರಕ್ಷತೆಯ ಬಗ್ಗೆ ಗಂಭೀರವಾದ ಕಳವಳವನ್ನು ಹುಟ್ಟು ಹಾಕಿದೆ.







