ಕೆನಡಾದ ಭಾರತೀಯ ಕಾನ್ಸುಲೇಟ್ ಮುಚ್ಚಿ ಪ್ರತಿಭಟನೆ: ಸಿಖ್ ಗುಂಪಿನ ಬೆದರಿಕೆ
ಗುರುಪತ್ವಂತ್ ಸಿಂಗ್ ಪನ್ನೂನ್ | Photo: Twitter
ಒಟ್ಟಾವ : ಕೆನಡಾದ ಗುರುನಾನಕ್ ಸಿಖ್ ಗುರುದ್ವಾರದ ಅಧ್ಯಕ್ಷ ಹರ್ದೀಪ್ ಸಿಂಗ್ ನಿಜ್ಜಾರ್ ನ ಹತ್ಯೆಯ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಸರಕಾರ ಆರೋಪಿರುವ ಹಿನ್ನೆಲೆಯಲ್ಲಿ, ಹತ್ಯೆಯನ್ನು ಖಂಡಿಸಿ ಮುಂದಿನ ವಾರ ಕೆನಡಾದಲ್ಲಿನ ಭಾರತದ ಕಾನ್ಸುಲೇಟ್ ಕಚೇರಿಗಳನ್ನು ಮುಚ್ಚಿ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ‘ಸಿಖ್ಸ್ ಫಾರ್ ಜಸ್ಟಿಸ್(ಎಸ್ಎಫ್ ಜೆ) ಬೆದರಿಕೆ ಒಡ್ಡಿದೆ.
ಒಟ್ಟಾವ, ಟೊರಂಟೊ ಮತ್ತು ವ್ಯಾಂಕೋವರ್ನಲ್ಲಿನ ಭಾರತೀಯ ಕಾನ್ಸುಲೇಟ್ ಕಚೇರಿಯ ಹೊರಗಡೆ ಮುಂದಿನ ವಾರ ಪ್ರತಿಭಟನೆ ನಡೆಸುವುದಾಗಿ ಎಸ್ಎಫ್ ಜೆ ಮೂಲಗಳನ್ನು ಉಲ್ಲೇಖಿಸಿ ಗ್ಲೋಬಲ್ ನ್ಯೂಸ್ ವರದಿ ಮಾಡಿದೆ.
‘ಭಾರತೀಯ ಕಾನ್ಸುಲೇಟರ್ ಗಳು ಕಾರ್ಯನಿರ್ವಹಿಸಲು ನಾವು ಬಿಡುವುದಿಲ್ಲ. ನಿಜ್ಜಾರ್ ನ ಹತ್ಯೆಗೆ ಆದೇಶ ನೀಡಿದವರ ಹೆಸರನ್ನು ಬಹಿರಂಗಪಡಿಸಲು ಕೆನಡಾ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಎಸ್ಎಫ್ ಜೆ ಯ ಕಾನೂನು ಸಲಹೆಗಾರ ಗುರುಪತ್ವಂತ್ ಸಿಂಗ್ ಪನ್ನೂನ್ ಹೇಳಿದ್ದಾರೆ.
ಈ ಮಧ್ಯೆ, ಕೆನಡಾದ ನೆಲದಲ್ಲಿ ಭಾರತ ವಿರೋಧಿ ಕೃತ್ಯದಲ್ಲಿ ತೊಡಗಿರುವ ಸಂಘಟನೆಗಳ ವಿರುದ್ಧ ಸೂಕ್ತ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ಭಾರತದ ವಿದೇಶಾಂಗ ವ್ಯವಹಾರ ಇಲಾಖೆ ಕೆನಡಾ ಸರಕಾರವನ್ನು ಆಗ್ರಹಿಸಿದೆ. ಖಾಲಿಸ್ತಾನ್ ಪರ ವಿಶ್ವದಾದ್ಯಂತ ಜನಾಭಿಪ್ರಾಯ ಸಂಗ್ರಹಿಸುತ್ತಿರುವ ಎಸ್ಎಫ್ ಜೆ , ಕೆನಡಾಕ್ಕೆ ಭಾರತೀಯ ಹೈಕಮಿಷನರ್ ಸಂಜಯ್ ವರ್ಮಾರನ್ನು ಉಚ್ಛಾಟಿಸುವಂತೆ ಆಗ್ರಹಿಸಿದೆ.
ಹರ್ದೀಪ್ ಹತ್ಯೆ ಪ್ರಕರಣವನ್ನು ಆರ್ಸಿಎಂಪಿ ತನಿಖೆ ನಡೆಸುತ್ತಿದ್ದು ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಆದರೆ, ಮೂವರು ಶಂಕಿತರ ಪತ್ತೆಗಾಗಿ ತನಿಖಾಧಿಕಾರಿಗಳು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆರೋಪಿಗಳಿಗೆ ಸೇರಿದ್ದು ಎಂದು ಶಂಕಿಸಲಾದ ವಾಹನವನ್ನು ಗುರುತು ಹಚ್ಚಲಾಗಿದೆ ಎಂದು ವರದಿಯಾಗಿದೆ.