ಶರ್ಜೀಲ್ ಇಮಾಮ್ ಬಂಧನದ ಬಗ್ಗೆ ಅಮೆರಿಕದ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ
ಭಾರತೀಯ ನಾಗರಿಕರ ಸಾಂವಿಧಾನಿಕ ಹಕ್ಕುಗಳ ಬಗ್ಗೆ ತೀರ್ಪು ನೀಡಲು USCIRFಗೆ ಯಾವುದೇ ಅಧಿಕಾರವಿಲ್ಲ: ಭಾರತದ ರಾಯಭಾರಿ

ವಿನಯ್ ಮೋಹನ್ ಕ್ವಾತ್ರಾ (Photo: India Today)
ಹೊಸದಲ್ಲಿ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಶರ್ಜೀಲ್ ಇಮಾಮ್ ಅವರನ್ನು ಧಾರ್ಮಿಕ ಸ್ವಾತಂತ್ರ್ಯದ ಪರವಾಗಿ ಧ್ವನಿ ಎತ್ತಿದ್ದಕ್ಕಾಗಿ ಭಾರತದಲ್ಲಿ ಬಂಧಿಸಲಾಗಿದೆ ಎಂದು ಹೇಳಿಕೆ ನೀಡಿದ್ದ ಅಮೆರಿಕದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (USCIRF) ವಿರುದ್ಧ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಅಮೆರಿಕದಲ್ಲಿರುವ ಭಾರತದ ರಾಯಭಾರಿ ವಿನಯ್ ಮೋಹನ್ ಕ್ವಾತ್ರಾ ಅವರು ಶನಿವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯಿಸಿ, ಭಾರತೀಯ ನಾಗರಿಕರ ಸಾಂವಿಧಾನಿಕ ಹಕ್ಕುಗಳ ಕುರಿತು ತೀರ್ಪು ನೀಡುವ ಯಾವುದೇ ಅಧಿಕಾರ ಅಥವಾ ಕಾನೂನುಬದ್ಧ ಸ್ಥಾನಮಾನ USCIRFಗೆ ಇಲ್ಲ ಎಂದು ಹೇಳಿದ್ದಾರೆ.
USCIRF ಭಾರತದ ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಮಾನ ಹಕ್ಕುಗಳ ಬದ್ಧತೆಯ ಕುರಿತು ಪಕ್ಷಪಾತಪೂರಿತ ಹಾಗೂ ಅಪೂರ್ಣ ಮಾಹಿತಿಯ ಆಧಾರದ ಮೇಲೆ ಮೌಲ್ಯಮಾಪನ ಮಾಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
“ಭಾರತೀಯ ನಾಗರಿಕರ ಸಾಂವಿಧಾನಿಕ ಹಕ್ಕುಗಳ ಬಗ್ಗೆ ತೀರ್ಪು ನೀಡಲು USCIRFಗೆ ಯಾವುದೇ ಕಾನೂನುಬದ್ಧ ಅಧಿಕಾರವಿಲ್ಲ. ಅದರ ನಿರಂತರ ಪಕ್ಷಪಾತದ, ತಪ್ಪು ಮಾಹಿತಿಯಿಂದ ಕೂಡಿದ ಮತ್ತು ಪೂರ್ವಾಗ್ರಹಪೀಡಿತ ಮೌಲ್ಯಮಾಪನಗಳು ಎಲ್ಲ ಧರ್ಮಗಳಿಗೂ ಸಮಾನ ಹಕ್ಕು ಮತ್ತು ಧಾರ್ಮಿಕ ಸ್ವಾತಂತ್ರ್ಯ ಒದಗಿಸುವ ಭಾರತದ ಸಾಂವಿಧಾನಿಕ ಬದ್ಧತೆಯನ್ನು ಕುಗ್ಗಿಸಲು ಸಾಧ್ಯವಿಲ್ಲ” ಎಂದು ಕ್ವಾತ್ರಾ ಹೇಳಿದ್ದಾರೆ.
ಇದೇ ವೇಳೆ, “USCIRFನ ಪೂರ್ವನಿರ್ಧರಿತ ರಾಜಕೀಯ ನಿರೂಪಣೆಗಳನ್ನು ಮೀರಿ ಭಾರತ ಅಭಿವೃದ್ಧಿ ಹೊಂದುತ್ತಿದೆ. ಇತರರಿಗೆ ಉಪದೇಶ ನೀಡುವ ಮೊದಲು ನಿಮ್ಮದೇ ಪೂರ್ವಾಗ್ರಹಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ” ಎಂದು ಅವರು ತಿರುಗೇಟು ನೀಡಿದ್ದಾರೆ.
USCIRF ಹೇಳಿದ್ದೇನು?
ಇದಕ್ಕೂ ಮೊದಲು USCIRF ತನ್ನ ಎಕ್ಸ್ ಖಾತೆಯಲ್ಲಿ ಶರ್ಜೀಲ್ ಇಮಾಮ್ ಅವರ ಕುರಿತು ಮಾಹಿತಿ ಹಂಚಿಕೊಂಡಿತ್ತು.
“ಧಾರ್ಮಿಕ ಸ್ವಾತಂತ್ರ್ಯದ ಪರವಾಗಿ ಪ್ರತಿಪಾದಿಸಿದ್ದಕ್ಕಾಗಿ ಭಾರತದಲ್ಲಿ ಬಂಧನಕ್ಕೊಳಗಾಗಿರುವ ಮುಸ್ಲಿಂ ವ್ಯಕ್ತಿ” ಎಂದು ಇಮಾಮ್ ಅವರನ್ನು ಆಯೋಗ ಬಣ್ಣಿಸಿತ್ತು.
ಈ ಹೇಳಿಕೆಯು ಶರ್ಜೀಲ್ ಇಮಾಮ್ ಅವರ ಬಂಧನವನ್ನು ಧಾರ್ಮಿಕ ಸ್ವಾತಂತ್ರ್ಯದ ಹೋರಾಟಕ್ಕೆ ಸಂಬಂಧಿಸಿ ನೋಡಿತ್ತು. ಇದಕ್ಕೆ ಭಾರತದ ರಾಯಭಾರಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಮಾಜಿ ವಿದ್ಯಾರ್ಥಿ ಹೋರಾಟಗಾರ ಶರ್ಜೀಲ್ ಇಮಾಮ್ ಅವರನ್ನು 2020ರ ಜನವರಿಯಲ್ಲಿ ಬಂಧಿಸಲಾಗಿತ್ತು. 2019ರ ಡಿಸೆಂಬರ್ ಮತ್ತು 2020ರ ಜನವರಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರುದ್ಧ ನಡೆದ ಪ್ರತಿಭಟನೆಗಳ ಸಂದರ್ಭದಲ್ಲಿ ಅವರು ಮಾಡಿದ ಭಾಷಣಗಳು ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡಿವೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ.
2020ರ ಆಗಸ್ಟ್ನಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಗಲಭೆಗಳ ಹಿಂದಿನ ದೊಡ್ಡ ಸಂಚಿನ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿ ಮಾಡಲಾಗಿತ್ತು.






