ಲಂಡನ್ | ಉದ್ಯೋಗದ ಆಮಿಷವೊಡ್ಡಿ ಮಹಿಳೆಯ ಅತ್ಯಾಚಾರ: ಭಾರತೀಯ ವ್ಯಕ್ತಿ ದೋಷಿ

PC | timesofindia
ಲಂಡನ್: ಉದ್ಯೋಗ ನೀಡುವ ಆಮಿಷವೊಡ್ಡಿ ಮಹಿಳೆಯೊಬ್ಬರನ್ನು ಲಂಡನ್ ಹೋಟೆಲ್ಗೆ ಕರೆದು ಅತ್ಯಾಚಾರ ಎಸಗಿದ ಆರೋಪದಲ್ಲಿ ಭಾರತೀಯನೊಬ್ಬನನ್ನು ಇಲ್ಲಿನ ನ್ಯಾಯಾಲಯ ದೋಷಿ ಎಂದು ಘೋಷಿಸಿದೆ. ಆತನನ್ನು ಸರಣಿ ಅಪರಾಧಿ ಎಂದು ಘೋಷಿಸುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾರ್ತ್ಹೋಲ್ಟ್ ನ ನಿವಾಸಿ ಗುರ್ವಿಂದರ್ ಸಿಂಗ್ (37) ಎಂಬ ಭಾರತೀಯ ಪ್ರಜೆಯನ್ನು ಸೌತ್ವಾರ್ಕ್ ಕ್ರೌನ್ ಕೋರ್ಟ್, ಅತ್ಯಾಚಾರ, ಅತ್ಯಾಚಾರ ಯತ್ನ, ಬಲವಂತದಿಂದ ಹಲ್ಲೆ, ಲೈಂಗಿಕ ಹಲ್ಲೆ ಮತ್ತು ಸಾಮಾನ್ಯ ಹಲ್ಲೆ ಆರೋಪದಲ್ಲಿ ದೋಷಿ ಎಂದು ತೀರ್ಮಾನಿಸಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಎಪ್ರಿಲ್ 15ರಂದು ಶಿಕ್ಷೆ ಘೋಷಿಸಲಾಗುತ್ತದೆ.
ಆರೈಕೆ ಸಿಬ್ಬಂದಿಯಾಗಿ ನಿಯೋಜಿಸುವುದಾಗಿ ಭರವಸೆ ನೀಡಿ ಮಹಿಳೆಯನ್ನು ಪಡ್ಡಿಂಗ್ ಟನ್ ಹೋಟೆಲ್ ಗೆ 2025ರ ಜೂ.21ರಂದು ಕರೆಸಿಕೊಂಡಿದ್ದ. ಅಲ್ಲಿ ಆಕೆ ಗಾಯಾಳು ಕ್ರೀಡಾಪಟುವಿನ ಆರೈಕೆ ಮಾಡಬೇಕು ಎಂದು ಸೂಚಿಸಿದ್ದ.
ಜಾಹೀರಾತು ನೀಡಿದ ಮಹಿಳೆಯ ಸಹಾಯಕಿ ಎಂದು ಸ್ಟೇಷನ್ ನಲ್ಲಿ ಪರಿಚಯಿಸಿಕೊಂಡಿದ್ದ. ಹೋಟೆಲ್ ಕೊಠಡಿಯೊಂದರಲ್ಲಿ ಆಕೆಯನ್ನು ಇರಿಸಿ, ರೋಗಿ ಶೀಘ್ರದಲ್ಲೇ ಬರುತ್ತಾರೆ ಎಂದು ನಂಬಿಸಿದ್ದ. ಬಳಿಕ ಸಿಂಗ್ ತಾನೇ ಕ್ರೀಡಾಪಟು ಎಂದು ಹೇಳಿಕೊಂಡ ಹೋಟೆಲ್ ಕೊಠಡಿಗೆ ಆಗಮಿಸಿ ಉಡುಪುಗಳನ್ನು ಬಿಚ್ಚಿ ಮಸಾಜ್ ಮಾಡುವಂತೆ ಕೇಳಿಕೊಂಡ. ಆಕೆ ನಿರಾಕರಿಸಿದಾಗ ಆಕೆಯ ಮೇಲೆ ಅತ್ಯಾಚಾರ ಎಸಗಿದ ಎಂದು ಆರೋಪಿಸಲಾಗಿತ್ತು. ಕೊಠಡಿಯಿಂದ ಓಡಿಹೋದ ಮಹಿಳೆ ಒಂದು ಟ್ಯಾಕ್ಸಿಯಲ್ಲಿ ತಪ್ಪಿಸಿಕೊಂಡಳು. ಅಂದು ಸಂಜೆ ಆರೋಪಿ ಮತ್ತೆ ಕರೆ ಮಾಡಿ ಈ ಬಗ್ಗೆ ದೂರು ನೀಡಿದರೆ ವಿಡಿಯೊ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆಪಾದಿಸಲಾಗಿದೆ.







