ಕರೋಲಿನಾ ಬೀಚ್ ನಲ್ಲಿ ಮುಳುಗಿ ಭಾರತೀಯ ಮೃತ್ಯು

ಕರೋಲಿನಾ: ಅಮೆರಿಕದ ದಕ್ಷಿಣ ಕರೋಲಿನಾ ಕಡಲ ಕಿನಾರೆಯಲ್ಲಿ ಮುಳುಗಿ ಭಾರತೀಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ, ಜಾರ್ಜಿಯಾದಲ್ಲಿ ವಾಸವಿದ್ದ 49 ವರ್ಷ ವಯಸ್ಸಿನ ವ್ಯಕ್ತಿ, ಹಿಲ್ಟನ್ ಹೆಡ್ ದ್ವೀಪದ ಬ್ಯೂಫೋರ್ಟ್ ಕೌಂಟಿಯಲ್ಲಿ ತಮ್ಮ ಮಗನ ಜತೆ ಅಲೆಗಳ ಹೊಡೆತಕ್ಕೆ ಸಿಕ್ಕಿ ಮೃತಪಟ್ಟರು ಎಂದು ತಿಳಿದು ಬಂದಿದೆ.
ಮೃತ ವ್ಯಕ್ತಿಯನ್ನು ಜಾರ್ಜಿಯಾ ನಿವಾಸಿ ಸುಮನ್ ಕುಂದು ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮೃತಪಟ್ಟ ವ್ಯಕ್ತಿ ಭಾರತೀಯ ಎನ್ನುವುದನ್ನು ಅಟ್ಲಾಂಟಾದಲ್ಲಿರುವ ಭಾರತೀಯ ದೂತಾವಾಸ ಸ್ಪಷ್ಟಪಡಿಸಿದೆ.
ಹಿಲ್ಟನ್ ಹೆಡ್ ದ್ವೀಪದ ಬಳಿ ನಡೆದ ದುರಂತದ ಘಟನೆಯಲ್ಲಿ ಭಾರತೀಯ ವ್ಯಕ್ತಿ ಮೃತಪಟ್ಟಿರುವ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸುತ್ತಿದ್ದೇವೆ. ಸ್ಥಳೀಯ ಅಧಿಕಾರಿಗಳ ಜತೆ ಮತ್ತು ಮಾನವೀಯ ಸಂಘಟನೆಗಳ ಜತೆ ಭಾರತೀಯ ಕಾನ್ಸುಲೇಟ್ ಸಂಪರ್ಕದಲ್ಲಿದ್ದು, ಈ ಕಠಿಣ ಪರಿಸ್ಥಿತಿಯಲ್ಲಿ ಕುಟುಂಬಕ್ಕೆ ಸಂಪೂರ್ಣ ಬೆಂಬಲ ನೀಡುತ್ತಿದೆ" ಎಂದು ಎಕ್ಸ್ ಪೋಸ್ಟ್ನಲ್ಲಿ ಹೇಳಲಾಗಿದೆ.
ಸ್ಥಳೀಯ ಕಾಲಮಾನದ ಪ್ರಕಾರ ಸಂಜೆ 7ರ ಸುಮಾರಿಗೆ ಬಿಯೋಫೋರ್ಟ್ ಕೌಂಟಿ ಷೆರೀಫ್ ಕಚೇರಿಗೆ ತುರ್ತು ಕರೆ ಬಂದಿದೆ. ಸ್ಥಳಕ್ಕೆ ಧಾವಿಸಿದಾಗ ಕುಂಡು ಮತ್ತು ಅವರ ಮಗ ತೆರೆಗಳ ಹೊಡೆತಕ್ಕೆ ಸಿಕ್ಕಿರುವುದು ತಿಳಿದು ಬಂತು. ಕುಂಡು 7.51ರ ಸುಮಾರಿಗೆ ಮುಳುಗಿ ಮೃತಪಟ್ಟಿದ್ದು, ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ" ಎಂದು ಪೊಲೀಸರು ಅಧಿಕೃತ ಹೇಳಿಕೆ ನೀಡಿದ್ದಾರೆ. ಕುಂಡು ನೆರವಿಗಾಗಿ ಯಾಚಿಸುತ್ತಿದ್ದಾಗ ಅಕ್ಕಪಕ್ಕದವರು ಧಾವಿಸಿ ರಕ್ಷಿಸುವ ಪ್ರಯತ್ನ ಮಾಡಿದರು. ರಕ್ಷಣಾ ಪಡೆ ಇಬ್ಬರನ್ನೂ ನೀರಿನಿಂದ ಮೇಲಕ್ಕೆ ಕರೆ ತಂದಿದೆ. ಆದರೆ ಆ ವೇಳೆಗೆ ಕುಂಡು ಮೃತಪಟ್ಟಿದ್ದರು ಎನ್ನಲಾಗಿದೆ.







